ಜಗತ್ತನ್ನೇ ತಲ್ಲಣಗೊಳಿಸಿದ ಮಾರಣಾಂತಿಕ ಕಾಯಿಲೆ ಕೊರೋನ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಣೆ ಹೊರಡಿಸಿದ ಲಾಕ್‍ಡೌನ್‍ನಿಂದಾಗಿ ದೇಶದ ಜನಸಾಮಾನ್ಯರ ಜನಜೀವನ ಕಷ್ಟಕರವಾಗಿರುವ ಈ ಸಂಧಿಗ್ದ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಅನ್ನದಾತರು, ಅಗಸರು, ಕ್ಷೌರಿಕರು, ನೇಕಾರರು ಹಾಗೂ ಆಟೋಚಾಲಕರ ನೆರವಿಗೆ ಧಾವಿಸಿ 1,610ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮಾನ್ಯ ಮುಖ್ಯಮಂತ್ರಿಗಳು ಇಂದು ಘೋಷಿಸಿರುವಂತೆ ಸಂಕಷ್ಟಕ್ಕೊಳಗಾದ ಕುಟುಂಬಗಳ ಮುಖ್ಯಸ್ಥರ ಖಾತೆಗಳಿಗೆ ನೇರವಾಗಿ ಬ್ಯಾಂಕುಗಳ ಮೂಲಕ ಸಹಾಯಧನವನ್ನು ಜಮಾ ಮಾಡಲಾಗುತ್ತಿದೆ. ಈ ಅನುದಾನ ಮುಂದಿನ ಒಂದು ವಾರದೊಳಗಾಗಿ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ವಿಶೇಷವಾಗಿ ರಾಜ್ಯದ ಹೂವು, ಹಣ್ಣು ಬೆಳೆಗಾರರು, ಆಟೋ, ಕ್ಯಾಬ್ ಚಾಲಕರು, ಮಡಿವಾಳರು, ಕ್ಷೌರಿಕರು, ನೇಕಾರರು ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಸಂಕಷ್ಟಕ್ಕೊಳಗಾದ ಅನೇಕ ಕುಟುಂಬಗಳಿಗೆ ಈ ಸಹಾಯಧನ ವರವಾಗಲಿದೆ. ರಾಜ್ಯದಲ್ಲಿ ಸುಮಾರು 12,000ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೂವುಗಳು ಮಾರಾಟಗೊಳ್ಳದೆ ಲಕ್ಷಾಂತರ ರೂ.ಗಳ ನಷ್ಟ ಅನುಭವಿಸಿದ್ದರು. ಪ್ರತಿ ಹೆಕ್ಟೇರ್‍ಗೆ ಸರ್ಕಾರ ನೀಡುವ ರೂ.25,000ಗಳ ಸಹಾಯಧನದಿಂದಾಗಿ ರೈತರು ಕೊಂಚ ಮಟ್ಟಿನ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ಹಣ್ಣು ಬೆಳೆಗಾರರಿಗೂ ಸಹಾಯಧನ ನೀಡುವ ಕುರಿತು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ವರದಿ ಪಡೆದು, ನೆರವು ನೀಡುವುದಾಗಿ ತಿಳಿಸಿರುವುದೂ ಕೂಡ ಜನರಲ್ಲಿ ನೆಮ್ಮದಿಯಿಂದ ಇರುವಂತೆ ಮಾಡಿದೆ.
ಲಾಕ್‍ಡೌನ್ ಘೋಷಣೆಯಾದ ದಿನದಿಂದ ಈವರೆಗೆ ಕ್ಷೌರಿಕ ವೃತ್ತಿಯಿಂದ ಜೀವನ ನಿರ್ವಹಿಸುತ್ತಿದ್ದ ಕ್ಷೌರಿಕರ ಕುಟುಂಬಗಳ ಬದುಕು ಅತಂತ್ರವಾಗಿತ್ತು. ಉದ್ಯೋಗವಿಲ್ಲದೆ, ಬೇರೆ ಕೆಲಸವಿಲ್ಲದೇ ಜೀವನ ನಿರ್ವಹಣೆ ದುಸ್ತರವಾಗಿತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಕ್ಷೌರಿಕ ವೃತ್ತಿಯಿಂದ ಜೀವನ ನಿರ್ವಹಿಸುತ್ತಿದ್ದ ಸವಿತಾ ಬಂಧುಗಳಿಗೆ ಅನುಕೂಲವಾಗಿದೆ. ಸಹಾಯಧನ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಾ ಸವಿತಾ ಬಂಧುಗಳ ಪರವಾಗಿ ಅಭಿನಂದನೆ ಸಲ್ಲಿಸಲಾಗಿದೆ ಎಂದು ಕ್ಷೌರಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮೋಹನ್ ಅವರು ತಿಳಿಸಿದ್ದಾರೆ.
ಅಂತೆಯೇ ಮಡಿವಾಳರು ಕೂಡ, ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಕುಟುಂಬಗಳ ನಿರ್ವಹಣೆಯೂ ಕಷ್ಟಕರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ನೆರವಿಗೆ ಧಾವಿಸಿದೆ. ಮನೆಯ ಯಜಮಾನನಂತೆ ಸಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾರ್ಹರು ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಗಿರಿಯಪ್ಪ, ಕಾಂತೇಶ ಕದರಮಂಡಲಗಿ, ಬೆಂಕಿ ಹನುಂಮತಪ್ಪ, ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಅವರು ಪ್ರಶಂಸಿದ್ದಾರೆ.