ಶಿವಮೊಗ್ಗ ಆಗಸ್ಟ್ 22 ರಾಜ್ಯದಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸುವ ಸಂಬಂಧ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ.
ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯು ಪಿಓಪಿಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಅಧಿಸೂಚನೆಯನ್ನು 20/072016 ರಂದು ಹೊರಡಿಸಿದೆ.
ಬೇರೆ ರಾಜ್ಯದಿಂದ ಬರುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಬದಲು ಬಣ್ಣರಹಿತ ಮಣ್ಣಿನ ಮೂರ್ತಿಗಳನ್ನು ತಯಾರಿಸುವಂತೆ ತಯಾರಕರಿಗೆ ವಿವರಿಸಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳಿಗೆ ವ್ಯಾಪಾರ ಲೈಸೆನ್ಸ್ ನೀಡದಿರಲು ಮತ್ತು ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿ/ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತಕ್ಷಣ ಜರುಗಿಸುವುದು.
ಸಾರಿಗೆ ಇಲಾಖೆ ಅಧಿಕಾರಿಗಳು ಬೇರೆ ಊರುಗಳಿಂದ ಮತ್ತು ರಾಜ್ಯಗಳಿಂದ ಬರುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಗೌರಿ ಗಣೇಶ ಹಬ್ದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವುದು. ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‍ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸುವುದು.
ಗರಿಷ್ಟ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವುದು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಸಮಿತಿಯವರು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಯನ್ನು ಪಡೆದು ನಂತರವೇ ಸ್ಥಾಪಿಸುವುದು. ಈ ಅನುಮತಿ ಪತ್ರದಲ್ಲಿ ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯತನಕ ಧ್ವನಿವರ್ಧಕ ಬಳಕೆ ನಿಷೇಧಿಸುವುದು. ಯಾವುದೇ ಕಾರಣಕ್ಕೂ ತಿಂಗಳುಗಳವರೆಗೆ ಗಣೇಶನನ್ನು ಕೂರಿಸುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ನಿರ್ಬಂಧಿಸುವುದು.
ಪಿಓಪಿ ಅಥವಾ ಬಣ್ಣವನ್ನು ಬಳಸಿದ ಮೂರ್ತಿಗಳನ್ನು ನೇರವಾಗಿ ಕೆರೆ, ಹೊಂಡ, ನದಿಗಳಿಗೆ ಬಿಡದೆ ಮೂರ್ತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳು ಅಥವಾ ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು. ಉತ್ಸವ ಆಚರಿಸಲು ಬೇಕಾದ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಪೊಲೀಸ್, ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯುವುದು, ನಿಯಮಾನುಸಾರ ಧ್ವನಿವರ್ಧಕಗಳನ್ನು ಬಳಸಲು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

error: Content is protected !!