ಶಿವಮೊಗ್ಗ, ಜೂನ್. 15 : ಪ್ರಕೃತಿ ಅಮೂಲ್ಯವಾದದ್ದು ಅದರ ಮೇಲಾಗುತ್ತಿರುವ ಮಾನವನ ದಾಳಿಯಿಂದ ಇಂದು ಜಾಗತಿಕ ತಾಪಮಾನ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ಮುಂತಾದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಇನ್ನೂ ನಾವು ಎಚ್ಚೆತ್ತುಕೊಂಡು ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅದನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗದೆ ಹೋದರೆ ಹೆಚ್ಚಿನ ಭೀಕರ ಪರಿಣಾಮವನ್ನು ಎದುರಿಸಬೇಕಿದೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಎಚ್ಚರಿಸಿದರು.
ನಗರದ ಕುವೆಂಪು ಶತಮಾನೋತ್ಸವ ಬಿ.ಎಡ್ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಪರಿಸರ ಅಧ್ಯಯನ ಕೇಂದ್ರ, ವಿಜಯ ಕರ್ನಾಟಕ ಹಾಗೂ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ವತಿಯಿಂದ ಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಶಿವಮೊಗ್ಗದಂತಹ ಮಲೆನಾಡಿನ ಜಿಲ್ಲೆಯಲ್ಲಿಯೆ ಬರಗಾಲದ ವಾತವರಣ ಸೃಷ್ಠಿಯಾಗಿದೆ. ಇನ್ನಾದರೂ ಜಿಲ್ಲೆಯ ಜನ ಪರಿಸರ ರಕ್ಷಣೆಯ ಪಣತೊಟ್ಟು ಮಲೆನಾಡನ್ನ ಉಳಿಸಿಕೊಳ್ಳಬೇಕಾಗಿದೆ ಎಂದು ಅವರು ಜನರಲ್ಲಿ ತಿಳುವಳಿಕೆ ಮೂಡಿಸಿದರು.
ಪ್ರಕೃತಿಯ ನಾಶದಿಂದ ಭೂಮಿಯ ಮೇಲಿನ ಪ್ರಾಣಿ ಪಕ್ಷಿಗಳ ಮೇಲೂ ದುಷ್ಪರಿಣಾಮಗಳು ಬೀರುತ್ತಿದ್ದು ಅನೇಕ ಜೀವಿಗಳು ಸಾವಿಗೀಡಾಗುತ್ತಿವೆ. ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲಾ ವಿಷವಾಗುತ್ತಿವೆ ಈ ಕುರಿತು ನಾವು ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು ಎಂದು ಅವರು ಜನರಿಗೆ ಕರೆಕೊಟ್ಟರು.
ನಾವು ಬಳಸುವ ಕಾಗದ ಹಾಗೂ ಇನ್ನಿತರೆ ವಸ್ತುಗಳಿಗಾಗಿ ಲಕ್ಷಾಂತರ ಮರಗಳು ನಾಶಗೊಳ್ಳುತ್ತಿವೆ. ಸಹಸ್ರ ಟನ್‍ಗಳಷ್ಟು ಪ್ಲಾಸ್ಟಿಕ್ ಸಮುದ್ರ ಸೇರುತ್ತಿದ್ದು ಜಲಚರ ಜೀವಿಗಳಿಗೂ ಮಾರಕವಾಗಿದೆ. ಮಾನವನ ಆರೋಗ್ಯದ ಮೇಲೂ ಪರಿಸರ ಮಾಲಿನ್ಯ ಪರಿಣಾಮ ಬೀರುತ್ತಿದೆ. ಜನರು ಜಾಗೃತರಾಗಿ ಭೂಮಿ ವಿಷಮಯವಾಗುವುದನ್ನು ತಡೆಯಬೇಕಾದ ಅನಿವಾರ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ವೀರಭದ್ರಪ್ಪ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಉಂಬ್ಳೆಬೈಲ್ ಮೋಹನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ. ಮಧು, ಕಿಡ್ಸ್‍ನ ಅಧ್ಯಕ್ಷ ಸಿ.ಎಸ್ ಚಂದ್ರಶೇಖರ್ ಹಾಗೂ ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ ಉಪಸ್ಥಿತರಿದ್ದರು.