ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮ
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗವು ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ‘ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ)’, ‘ಪರಿಸರ ಕೃಷಿ ವಿಧಾನಗಳು’ ಕುರಿತು ಆರು ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಡಾ. ಬಿ. ಸಿ. ಹನುಮಂತಸ್ವಾಮಿ, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಅವರು ಆರು ದಿನಗಳ ತರಬೇತಿ ಕಾರ್ಯಕ್ರಮವು ಕೃಷಿ ಮಹಿಳೆಯರಿಗೆ ಕೃಷಿಯಲ್ಲಿ ಆಧುನಿಕ ಪದ್ಧತಿಗಳು, ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಸ್ವಾವಲಂಬಿಗಳಾಗಲು ನಿರಂತರ ಆದಾಯ ನೀಡುವ ಕೃಷಿಯೇತರ ಚಟುವಟಿಕೆಗಳಾದ ಜೇನುಸಾಕಾಣಿಕೆ, ಹಸು, ಕುರಿ, ಮೇಕೆ, ಮೊಲ ಮತ್ತು ಮೀನು ಸಾಕಾಣಿಕೆ ಕುರಿತ ಮಾಹಿತಿ ನೀಡಲಾಗುವುದು. ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುವುದು ಎಂದು ತಿಳಿಸುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ. ಹೇಮ್ಲಾನಾಯಕ್, ವಿಸ್ತರಣಾ ನಿರ್ದೇಶಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ನೆರವೇರಿಸಿ ಮಾತನಾಡುತ್ತಾ, ಕೃಷಿ ದೇಶದ ಬೆನ್ನೆಲುಬು. ರೈತರೊಂದಿಗೆ ಕುಟುಂಬದ ರೈತ-ಮಹಿಳೆಯರೂ ಕೈಜೋಡಿಸುವುದರ ಮೂಲಕ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ನೆರವು ನೀಡಲೆಂದು ಕೃಷಿ ಮಹಿಳೆಯರಿಗೆ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಈ ತರಬೇತಿಯಲ್ಲಿ ಸಮಗ್ರ ಕೃಷಿ ಪದ್ಧತಿ, ಅಂತರ ಬೆಳೆಗಳು, ಕೃಷಿಯೇತ ಚಟುವಟಿಕೆಗಳು ಮತ್ತು ನಿರಂತರ ಆದಾಯ ನೀಡುವಂತ ಉಪಕಸುಬುಗಳಾದ ಹೈನುಗಾರಿಕೆ, ಜೇನುಸಾಕಾಣಿಕೆ, ಮೌಲ್ಯವರ್ಧನೆ, ಪುಷ್ಪ ಕೃಷಿ, ಅಣಬೆ ಕೃಷಿ, ಕುರಿ-ಮೇಕೆ ಸಾಕಾಣಿಕೆ, ಮೀನು ಸಾಕಾಣಿಕೆಗಳ ಕುರಿತು ಮಾಹಿತಿ ನೀಡಲಾಗುವುದು. ಇವುಗಳನ್ನು ‘ಕೃಷಿ ಸಖಿ’ ಯರು ಅಳವಡಿಸಿಕೊಂಡಲ್ಲಿ ನಿರಂತರ ಆದಾಯಕ್ಕೆ ದಾರಿಯಾಗುವುದರಿಂದ ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ಪ್ರೇರೇಪಿಸಿದರು. ಅಲ್ಲದೆ, ಸ್ವಸಹಾಯ ಸಂಘದ ಮಹಿಳೆಯರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಂಘದ ಹೆಸರಿನಲ್ಲಿ ಲೇಬಲ್ ಮಾಡಿ ಮಾರಾಟ ಮಾಡಿದ್ದೇ ಆದಲ್ಲಿ ಹೆಚ್ಚಿನ ಆದಾಯ ಗಳಿಸಬಹುದೆಂದು ಕಿವಿ ಮಾತು ಹೇಳಿದರು. ಒಟ್ಟಿನಲ್ಲಿ ‘ಕೃಷಿ ಸಖಿ’ ಅಥವಾ ರೈತ ಮಹಿಳೆಯರು ನಿರಂತರ ಆದಾಯ ಗಳಿಸಲು ಅನೇಕ ಚಟುವಟಿಕೆಗಳಿದ್ದು, ಅವುಗಳ ಬಗ್ಗೆ ಮಾಹಿತಿ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.
ಡಾ. ಎಸ್. ಯು. ಪಾಟೀಲ್, ಸಹ ವಿಸ್ತರಣಾ ನಿರ್ದೇಶಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಮಾತನಾಡುತ್ತಾ, ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ರೈತರು ಮತ್ತು ರೈತ ಮಹಿಳೆಯರು ಕಾಲಕ್ಕನುಸಾರವಾಗಿ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದರಿಂದ ನಿರೀಕ್ಷಿತ ಲಾಭಗಳಿಸಬಹುದೆಂದು ತಿಳಿಸಿದರು. ರೈತರು ಯಾವುದೇ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದಾಗ ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಬಹುದು. ಅಲ್ಲದೆ, ಕೃಷಿಯೊಂದಿಗೆ ಉಪಕಸುಬುಗಳನ್ನು ಕೈಗೊಂಡಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸಿದಲ್ಲಿ ಕೃಷಿಯಲ್ಲಿ ನಷ್ಟ ಹೊಂದುವ ಸಾಧ್ಯತೆ ತಪ್ಪಿಸಬಹುದೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬಿ. ಎಂ. ದುಶ್ಯಂತ್ ಕುಮಾರ್, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಕೃಷಿಗೆ ಅತ್ಯುತ್ತಮವಾದ ಸಂಪತ್ತು ಮಣ್ಣು. ಆದ್ದರಿಂದ ಮಣ್ಣಿನ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಹವಾಮಾನ ಬದಲಾವಣೆ ಮತ್ತು ಕೃಷಿ ವ್ಯವಸ್ಥೆಯ ಮೇಲೆ ಅದರ ಪರಿಣಾಮ, ಮಣ್ಣು ಮತ್ತು ನೀರಿನ ಪರೀಕ್ಷೆ ಮತ್ತು ಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಈ ಆರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಜೀವನೋಪಾಯ ಚಟುವಟಿಕೆಗಳ ಪ್ರಾಮುಖ್ಯತೆ, ಸಮಗ್ರ ಕೃಷಿ ಪದ್ದತಿಗಳು, ಭೂ ಅಭಿವೃದ್ಧಿ ಕ್ರಮಗಳು, ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು, ಜೇನು ಸಾಕಾಣಿಕೆ, ಅಣಬೆ ಕೃಷಿ, ಸುಧಾರಿತ ಕೋಳಿ ಸಾಕಾಣಿಕೆ, ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ಪ್ರಮುಖ ಹಣ್ಣು, ಹೂ ಮತ್ತು ತರಕಾರಿ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮವನ್ನು ಡಾ. ಅರುಣ್‍ಕುಮಾರ್ ನಿರೂಪಿಸಿದರು ಹಾಗೂ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ವಂದಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 30 ಜನ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಕೃಷಿ ಸಖಿಯರು) ಮತ್ತು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಾಗೂ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.