ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮ
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ವತಿಯಿಂದ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ), ‘ಪರಿಸರ ಕೃಷಿ ವಿಧಾನಗಳು’ ಕುರಿತು ಆರು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನಾ ಸೊಸೈಟಿ, ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಡಾ. ಬಿ. ಸಿ. ಹನುಮಂತಸ್ವಾಮಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಅವರು ಆರು ದಿನಗಳ ತರಬೇತಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮವನ್ನು ಶ್ರೀ ಪ್ರಕಾಶ್. ಎನ್. ಡಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ತರಬೇತಿ ಕಾರ್ಯಕ್ರಮದ ಅಗತ್ಯತೆಗಳ ಬಗ್ಗೆ ವಿವರಿಸಿದರು ಮತ್ತು ಕೃಷಿ ಜ್ಞಾನವನ್ನು ಹೆಚ್ಚಿಸುವ ಅವಕಾಶವನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಡಾ. ಬಿ. ಎಂ. ದುಶ್ಯಂತ್ ಕುಮಾರ್, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಹವಾಮಾನ ಬದಲಾವಣೆ ಮತ್ತು ಕೃಷಿ ವ್ಯವಸ್ಥೆಯ ಮೇಲೆ ಅದರ ಪರಿಣಾಮ, ಮಣ್ಣು ಮತ್ತು ನೀರಿನ ಪರೀಕ್ಷೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬಿ. ಹೇಮ್ಲಾನಾಯಕ್, ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ. ಇವರು ತಮ್ಮ ಭಾಷಣದಲ್ಲಿ ಸಮಗ್ರ ಕೃಷಿ ಪದ್ಧತಿ, ಪೌಷ್ಟಿಕ ಕೈತೋಟ, ಮೌಲ್ಯವರ್ಧನೆ, ಪಶು ಸಂಗೋಪನೆ ಮತ್ತು ಜೇನು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
ಈ ಆರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಜೀವನೋಪಾಯ ಚಟುವಟಿಕೆಗಳ ಪ್ರಾಮುಖ್ಯತೆ, ಸಮಗ್ರ ಕೃಷಿ ಪದ್ದತಿಗಳು, ಭೂ ಅಭಿವೃದ್ಧಿ ಕ್ರಮಗಳು, ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು, ಜೇನು ಸಾಕಾಣಿಕೆ, ಅಣಬೆ ಕೃಷಿ, ಸುಧಾರಿತ ಕೋಳಿ ಸಾಕಾಣಿಕೆ, ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ಪ್ರಮುಖ ಹಣ್ಣು, ಹೂ ಮತ್ತು ತರಕಾರಿ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮವನ್ನು ಡಾ. ಅರುಣ್ಕುಮಾರ್ ನಿರೂಪಿಸಿದರು ಹಾಗೂ ಡಾ. ಎಂ. ಬಸವರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 30 ಜನ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಕೃಷಿ ಸಖಿಯರು) ಮತ್ತು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಾಗೂ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.