8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023
ಸಾಗರ: ಪ್ರತಿಭಾವಂತರಿಗೆ ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವ ಜತೆಯಲ್ಲಿ ಯುವ ಕಲಾವಿದರಿಗೆ ಪರಿಣಿತಿ ಕಲಾಕೇಂದ್ರ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಭಾರತೀಯ ವಿದ್ಯಾಭವನ ಜಂಟಿ ನಿರ್ದೇಶಕ ವೇಣುಗೋಪಾಲ್ ಹೇಳಿದರು.
ಪರಿಣಿತಿ ಕಲಾಕೇಂದ್ರದ 8ನೇ ವರ್ಷದ ಸಂಭ್ರಮದ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ “8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023” ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪರಿಣಿತಿ ಕಲಾಕೇಂದ್ರ ಉತ್ತಮ ಸೇವೆ ಸಲ್ಲಿಸುತ್ತಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಸಾಗರಕ್ಕೆ ಕರೆಯಿಸುವ ಮುಖಾಂತರ ವೈವಿಧ್ಯ ನೃತ್ಯ ಪ್ರಕಾರಗಳ ಬಗ್ಗೆ ಸಾಗರದ ಸ್ಥಳೀಯ ಪ್ರತಿಭೆಗಳಿಗೆ ಪರಿಚಯಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಆಗುತ್ತಿದೆ ಎಂದು ತಿಳಿಸಿದರು.
ಉದ್ಯಮಿ ಟಿ.ವಿ.ಪಾಂಡುರಂಗ ಮಾತನಾಡಿ, ಸಂಸ್ಕೃತಿ ಪರಂಪರೆ ಬಿಂಬಿಸುವ ಕಾರ್ಯ ಅಭಿನಂದನೀಯ. ರಾಮಾಯಣ, ಮಹಾಭಾರತದ ಕಥನಗಳನ್ನು ನೃತ್ಯದ ಮೂಲಕ ಸುಲಭವಾಗಿ ಅರ್ಥಮಾಡಿಸಲು ಸಾಧ್ಯವಿದೆ. ಎಲ್ಲ ನೃತ್ಯಗಳ ಮೂಲಕ ಒಂದೊಂದು ಕಥನವನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ ಎಂದರು.
ಮಲೇಷಿಯಾ ನೃತ್ಯ ಗುರು ಡಾ. ಗಣೇಶನ್ ಮಾತನಾಡಿ, ರಾಷ್ಟ್ರೀಯ ನೃತ್ಯ ಮಹೋತ್ಸವ ವೇದಿಕೆಯು ಯುವ ಪ್ರತಿಭಾವಂತ ಕಲಾವಿದರಿಗೆ ಅತ್ತ್ಯುತ್ತಮ ವೇದಿಕೆ ಹಾಗೂ ಅವಕಾಶ ಸೃಷ್ಠಿಸುತ್ತದೆ. ಇಂತಹ ಉತ್ಸವ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಪರಿಣಿತಿ ಕಲಾಕೇಂದ್ರದ ವಿದ್ವಾನ್ ಎಂ.ಗೋಪಾಲ್ ಮಾತನಾಡಿ, ನಮ್ಮ ಕಲಾಕೇಂದ್ರದ ವತಿಯಿಂದ ನೃತ್ಯ ತರಬೇತಿ ಜತೆಯಲ್ಲಿ ಯುವ ಉತ್ಸವ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು, ಕೇರಳ, ಪಶ್ಚಿಮ ಬಂಗಾಳ, ಮಲೇಷಿಯಾ ಸೇರಿ ವಿವಿಧೆಡೆಯಿಂದ ಕಲಾವಿದರು ನೃತ್ಯ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದರು.
ಉದ್ಯಮಿ ಟಿ.ವಿ.ಪಾಂಡುರಂಗ ಅವರಿಗೆ ಎಸ್.ಎಸ್.ರಮೇಶ್ ಸ್ಮಾರಕ ಪುರಸ್ಕಾರ, ಡಾ. ಗಣೇಶನ್ ಮತ್ತು ಬಿ.ವಿ.ದತ್ತಾತ್ರೇಯ ಅವರಿಗೆ ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ. ಮಾಯಾ ರಾಜೇಶ್ ಅವರಿಗೆ ಪರಿಣಿತಿ ಎಕ್ಸಲೆನ್ಸ್, ಅಂಗ್ಸುಮಾನ್ ಗುಪ್ತಾ, ಅರ್ಚನಾ ಪುಣ್ಯೇಶ್ ಹಾಗೂ ನಿಖಿತಾ ಮಂಜುನಾಥ್ ಅವರಿಗೆ ಯಂಗ್ ಅಚೀವರ್ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ವಿಠ್ಠಲ್ ಪೈ ಹೆಗ್ಗೋಡು, ಉದ್ಯಮಿ ಎಸ್.ಡಿ.ವೀರಪ್ಪ ಉಪಸ್ಥಿತರಿದ್ದರು.