ಶಿವಮೊಗ್ಗ, ಡಿಸೆಂಬರ್ 16 : ಪೊಲೀಸರು ತಮ್ಮ ವೃತ್ತಿ ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡು ಸದಾ ಜಾಗೃತವಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಪೊಲೀಸ್ ಇಲಾಖೆಯು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 3ದಿನಗಳ ಕಾಲ ನಡೆಯಲಿರುವ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೊಲೀಸರು ತಮ್ಮ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದವರು ನುಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರೂ ವಿಜಯಿಗಳಾಗುವುದು ಸಾಧ್ಯವಿಲ್ಲದಿರಬಹುದು. ಆದರೆ ಗೆಲ್ಲುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಕ್ರೀಡೆಯಲ್ಲಿ ಸ್ಪರ್ಧಾಭಾವನೆ ಬಹುಮುಖ್ಯ. ಸಂಘಟಿತವಾದ ಪ್ರಯತ್ನಕ್ಕೆ ಜಯ ಖಂಡಿತ ಲಭ್ಯವಾಗಲಿದೆ. ಕ್ರೀಡೆಯಲ್ಲಿ ಎಲ್ಲಾ ಸ್ಪರ್ಧಿಗಳ ಪ್ರತಿಕ್ಷಣದ ಹೊಣೆಗಾರಿಕೆ, ಜವಾಬ್ದಾರಿ ಮುಖ್ಯ. ಇದು ದೈನಂದಿನ ಬದುಕಿಗೂ ಅನ್ವಯವಾಗಲಿದೆ. ಸಂಘಟಿತರಾಗಿ ನಿಯಮಪಾಲಿಸಿ ವಿಜಯಿಗಳಾದ ದೊರೆಯಬಹುದಾದ ಗೌರವ ಅಮೂಲ್ಯವಾದುದು ಎಂದವರು ನುಡಿದರು.
ಕ್ರೀಡೆಯಲ್ಲಿ ಏಕಾಗ್ರತೆ ಬಹುಮುಖ್ಯ. ಅಲ್ಲಿ ಗೆಲುವಿಗಾಗಿ ಸ್ಪರ್ಧಿಗಳು ತೋರುವ ಸಂಘಟಿತ ಯತ್ನ ವೈಯಕ್ತಿಕ ಬದುಕಿಗೂ ಪೂರಕವಾಗಿದೆ. ಗುಂಪು ಸ್ಪರ್ಧೆಗಳಿಂದಾಗಿ ನೌಕರರ ನಡುವೆ ಸ್ನೇಹ-ಸೌಹಾರ್ದತೆ ಹೆಚ್ಚಲಿದೆ ಎಂದರು.
ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎ.ಶಾಂತರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ|| ಶೇಖರ್ ಹೆಚ್.ತೆಕ್ಕಣ್ಣನವರ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪೊಲೀಸ್ ಕ್ರೀಡಾಳುಗಳು, ಮಹಿಳಾ ಪೊಲೀಸ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.