ಶಿವಮೊಗ್ಗ, ಆಗಸ್ಟ್ 07: ಕೌಟುಂಬಿಕ ಹಿಂಸೆಯಿಂದ ನೊಂದ ಮಹಿಳೆಯರಿಗೆ ಸ್ವಾಧಾರ ಗೃಹಗಳು ಮತ್ತು ಇತರೆ ಸಂಸ್ಥೆಗಳ ಮೂಲಕ ಸ್ವಂತ ಉದ್ಯೋಗಕ್ಕೆ ಪೂರಕವಾದ ತರಬೇತಿ, ಸಾಲ ಸೌಲಭ್ಯ ಮತ್ತು ಅರ್ಹರಿಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಕೊಡಿಸಲು ಒತ್ತು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಯೋಜನೆಗಳ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೌಟುಂಬಿಕ ದೌರ್ಜನ್ಯದಿಂದ ನೊಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ತರಬೇತಿ ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಆಗಬೇಕು. ಜೊತೆಗೆ ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಸಹಕಾರ ಪಡೆದು ಅವರಲ್ಲಿನ ಕೌಶಲ್ಯ ಗುರುತಿಸಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವ, ಇಲ್ಲವಾದಲ್ಲಿ ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ ವ್ಯವಸ್ಥೆ ಮಾಡಿಕೊಡಬೇಕು. ಹಾಗೂ ತಮ್ಮ ಗಮನಕ್ಕೂ ತಂದಲ್ಲಿ ಉದ್ಯೋಗಾವಶಕ್ಕೆ ಪ್ರಯತ್ನಿಸಲಾಗುವುದು ಎಂದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಸ್ವಾಧಾರ ಯೋಜನೆ, ಸಖಿ, ಮಹಿಳಾ ಅಭಿವೃದ್ದಿ ನಿಗಮ ಇತರೆ ಅನೇಕ ಕಾಯ್ದೆ, ಕಾನೂನು, ಯೋಜನೆಗಳ ಮೂಲಕ ಜಾಗೃತಿ ಮೂಡಿಸಿದಾಗ್ಯೂ ಮಹಿಳೆಯರು ಮತ್ತು ಮಕ್ಕಳ ವಿರುದ್ದ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿಯೇ ಇವೆ. ಆದ್ದರಿಂದ ಅಧಿಕಾರಿಗಳು ಇನ್ನೂ ಪರಿಣಾಮಕಾರಿಯಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು. ಹಾಗೂ ಎಲ್ಲ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚುತ್ತಿದೆ ಎಂದು ಕೆಲ ಸಂಘಟನೆಗಳು ತಿಳಿಸಿದ್ದು, ಅಧಿಕಾರಿಗಳು ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಿ ಕೆಲಸ ಮಾಡಬೇಕು ಎಂದರು.
ಪ್ರಧಾನ ಮಂತ್ರಿ ಮಾತೃವಂದನಾ, ಮಾತೃಪೂರ್ಣ ಮತ್ತು ಪೋಷಣ್ ಅಭಿಯಾನದ ಮೂಲಕ ಗರ್ಭಿಣಿ-ಬಾಣಂತಿ ಮಹಿಳೆಯರಿಗೆ ಅಪೌಷ್ಟಿಕತೆಯಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ವಿವರಿಸಿ, ಫಲಾನುಭವಿಗಳೇ ಕಡ್ಡಾಯವಾಗಿ ಸರ್ಕಾರ ನೀಡುವ ತರಕಾರಿ, ಬೇಳೆ-ಕಾಳು, ಧಾನ್ಯ, ಶೇಂಗಾ ಚಿಕ್ಕಿ ಮತ್ತು ಮೊಟ್ಟೆಯನ್ನು ಬಳಕೆ ಮಾಡುವಂತೆ ಸಿಬ್ಬಂದಿಗಳು ಮನವೊಲಿಸಬೇಕು ಹಾಗೂ ಎಲ್ಲ ಅರ್ಹರಿಗೂ ಈ ಯೋಜನೆ ತಲುಪಬೇಕು ಎಂದರು.
ಮಕ್ಕಳ ರಕ್ಷಣಾ ಘಟಕದಿಂದ ಸುಧಾರಣಾ ಸಂಸ್ಥೆಯ ಮಕ್ಕಳಿಗೆ, ಅಧಿಕಾರಿ/ಸಿಬ್ಬಂದಿಗಳು ಪ್ರೌಢಶಾಲಾ ಮಕ್ಕಳು, ಶಿಕ್ಷಕರು, ಸಾರ್ವಜನಿಕರು, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ/ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿಗಳಿಗೆ ಪೊಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಅಂತರ್ಜಾಲ ಸುರಕ್ಷತೆ, ಆನ್ಲೈನ್ ಸೇಫ್ಟಿ ಕುರಿತಂತೆ ತರಬೇತಿ ಮತ್ತು ಅರಿವು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕೋವಿಡ್ ಲಾಕ್ಡೌನ್ ವೇಳೆ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ ಆದಷ್ಟು ಆನ್ಲೈನ್ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.
ದತ್ತು ಕಾರ್ಯಕ್ರಮ ಮತ್ತು ಪೋಷಕತ್ವ ಕಾರ್ಯಕ್ರಮಗಳನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬೇಕು. ಪೋಷಕತ್ವ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಈ ವರ್ಷ ಕೇವಲ 01 ಮಗುವನ್ನು ಗುರುತಿಸಲಾಗಿದೆ. ಆದರೆ ಇಂತಹ ಮಕ್ಕಳು ಸಾಕಷ್ಟಿದ್ದು, ಕ್ಷೇತ್ರದಲ್ಲಿ ಗುರುತಿಸಿ ಸೌಲಭ್ಯ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶಂಕರಪ್ಪ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು 2016 ರಲ್ಲಿ ಆದೇಶಿಸಲಾಗಿದೆ. ಈ ಪ್ರಕಾರವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕ್ರಮ ವಹಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಪ್ರತಿಕ್ರಿಯಿಸಿ, ಎಸ್ಸಿ/ಎಸ್ಟಿ ಕಾಯ್ದೆಯನ್ವಯ ಪೊಕ್ಸೊ ಪ್ರಕರಣದ ಸಂತ್ರಸ್ತರಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಮಾತನಾಡಿ, ನೊಂದ ಮಹಿಳೆಯರಿಗೆ ಮಹಿಳೆಯರಿಗೆ ಜಿಲ್ಲಾ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಆಪ್ತ ಸಮಾಲೋಚನೆ ಮತ್ತು ಕಾನೂನು ನೆರವು ನೀಡಲಾಗುತ್ತಿದ್ದು, ಅವಶ್ಯಕತೆ ಇರುವವರೆಲ್ಲರಿಗೆ ಈ ಸೌಲಭ್ಯವನ್ನು ಅಧಿಕಾರಿ/ಸಿಬ್ಬಂದಿಗಳು ದೊರಕಿಸಿಕೊಡಬೇಕು. ಹಾಗೂ ಪೊಕ್ಸೊ ಕಾಯ್ದೆಯಡಿ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಮೊದಲು ನೇರವಾಗಿ ಪ್ರಾಧಿಕಾರಕ್ಕೆ ಅರ್ಜಿ ಬರುತ್ತಿತ್ತು, ಕೋರ್ಟ್ ವಿಚಾರಣೆ ನಡೆಸಿ ಪರಿಹಾರ ನೀಡುತ್ತಿತ್ತು. ಆದರೆ 2020 ರ ನವೆಂಬರ್ ಸುತ್ತೋಲೆಯಂತೆ ಇದೀಗ ಪೊಕ್ಸೊ ಕಾಯ್ದೆಯಡಿಯ ಪ್ರಕರಣಗಳನ್ನು ಪೊಕ್ಸೋ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಿ ಅವರೇ ಪರಿಹಾರ ಆದೇಶ ನೀಡುತ್ತಾರೆ ಎಂದು ಮಾಹಿತಿ ನೀಡಿದರು.
ಜೊತೆಗೆ ಬಾಲ್ಯ ವಿವಾಹ ಪ್ರಕರಣಗಳಡಿ ಹೆಚ್ಚೆಚ್ಚು ಎಫ್ಐಆರ್ ಆಗಬೇಕು. ಜನರು ಕಾನೂನು ಪ್ರಕ್ರಿಯೆಗಳಿಗೆ ಹೆದರಿಯಾದರೂ ಬಾಲ್ಯವಿವಾಹದಂತಹ ಪ್ರಕರಣ ಕಡಿಮೆ ಆಗುತ್ತವೆ. ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರೂ ಬಾಲ್ಯವಿವಾಹ ತಡೆಗೆ ಸಹಕರಿಸಬೇಕೆಂದರು.
ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರೇಶ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೊಕ್ಸೊ ಮತ್ತು ಮಹಿಳೆ ಮಕ್ಕಳ ವಿರುದ್ದ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪ್ರಕರಣದಲ್ಲಿ 45 ದಿನಗಳ ಒಳಗೆ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದರು.
ಜಿಲ್ಲಾ ನಿರೂಪಣಾಧಿಕಾರಿ(ಪ್ರಭಾರ) ಸುರೇಶ್ ಮಾತನಾಡಿ, ವಿಶೇಷ ಪಾಲನಾ ಯೋಜನೆಯಡಿ ಹೆಚ್ಐವಿ/ಏಡ್ಸ್ ಸೋಂಕಿತ/ಬಾಧಿತ ಮಕ್ಕಳ ಹಾಗೂ ಏಡ್ಸ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ನಿಮಿತ್ತ ಮಗುವಿಗೆ 18 ವಷಧ ತುಂಬವವರೆಗೆ ಪ್ರತಿ ಮಗುವಿಗೆ ಆರ್ಟಿಜಿಎಸ್ ಮೂಲಕ ರೂ.1000 ದಂತೆ ಆರ್ಥಿಕ ಸೌಲಭ್ಯ ನೀಡಲಾಗುತ್ತಿದ್ದು 2021 ರ ಜನವರಿಯಿಂದ ಮಾರ್ಚ್ವರೆಗೆ 443 ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಕೇಂದ್ರ ಪುರಸ್ಕøತ ಪ್ರಾಯೋಜಕತ್ವದಡಿ 145 ಮಕ್ಕಳಿಗೆ ಈ ಸೌಲಭ್ಯ ನೀಡಲಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿ2012 ರ ಮಾರ್ಚ್ ನಿಂದ 2021 ರವರೆಗೆ ಒಟ್ಟು 780 ಪ್ರಕರಣ ದಾಖಲಾಗಿದ್ದು , 309 ಪ್ರಕರಣ ಖುಲಾಸೆಗೊಳಿಸಲಾಗಿದೆ. 30 ಪ್ರಕರಣಗಳಲ್ಲಿ ಶಿಕ್ಷೆ ನೀಡಿದ್ದು 38 ತನಿಖೆ ಹಂತದಲ್ಲಿ ಮತ್ತು 351 ಪ್ರಕರಣ ನ್ಯಾಯಾಲಯ ವಿಚಾರಣೆಯಲ್ಲಿದೆ. 52 ಪ್ರಕರಣ ಚಾರ್ಜ್ಶೀಟ್ ಹಂತದಲ್ಲಿದೆ ಎಂದರು ಮಾಹಿತಿ ನೀಡಿದರು.
ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನವರಿಯಿಂದ ಮಾರ್ಚ್ ತ್ರೈಮಾಸಿಕದವರೆಗೆ ಒಟ್ಟು 258 ಗ್ರಾಮ ಮಟ್ಟದ ಸಭೆಗಳನ್ನು ಜಿಲ್ಲಾದ್ಯಂತ ಮಾಡಲಾಗಿ ಮಕ್ಕಳ ಆರೋಗ್ಯ, ಶಿಕ್ಷಣ, ಆಪ್ತಸಮಾಲೋಚನೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ತಡೆ ಇತರೆ ಸಮಸ್ಯೆ ಚರ್ಚಿಸಿ ಪರಿಹಾರ ಹಲವಾರು ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಮುಂದೆ ತ್ರೈಮಾಸಿಕದಲ್ಲಿ ಬಂದಂತಹ 17 ಗಂಡು ಮತ್ತು 54 ಹೆಣ್ಣು ಹಾಗೂ ಬಾಕಿ 35 ಪ್ರಕರಣ ಸೇರಿ 106 ಪ್ರಕರಣಗಳ ಪೈಕಿ 47 ಮಕ್ಕಳನ್ನು ಪೋಷಕರ ವಶಕ್ಕೆ, 26 ಮಕ್ಕಳ ಪಾಲನಾ ಸಂಸ್ಥೆಗಳಿಗೆ, 04 ಮಕ್ಕಳನ್ನು ದತ್ತು ಕೇಂದ್ರಕ್ಕೆ ಸೇರಿಸಲಾಗಿದ್ದು 28 ಪ್ರಕರಣ ಬಾಕಿ ಇವೆ ಎಂದರು. ಪುನರ್ವಸತಿ ಯೋಜನೆಯಡಿ ಸಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಗಂಗಾಬಾಯಿ ಮಾತನಾಡಿ, ಜೂನ್ ಅಂತ್ಯಕ್ಕೆ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಾದ 0-6 ವರ್ಷದ ಮಕ್ಕಳು, ಗರ್ಭಿಣ, ಬಾಣಂತಿ, ಕಿಶೋರಿಯರಿಗೆ ಆಹಾರ ವಿತರಣೆಯಲ್ಲಿ ಶೇ. 100 ಪ್ರಗತಿಯಾಗಿದೆ. ಮಾತೃಪೂರ್ಣ, ಮಾತೃವಂದನಾ ಯೋಜನೆಯಡಿ ಕೋವಿಡ್ ಹಿನ್ನೆಲೆಯಲ್ಲಿ ಗರ್ಭಿಣಿ-ಬಾಣಂತಿಯರ ಮನೆಗೇ ಧವಸ-ಧಾನ್ಯ, ಪೌಷ್ಟಿಕ ಆಹಾರ, ಮೊಟ್ಟೆ ತಲುಪಿಸಲಾಗುತ್ತಿದ್ದು ನಿಗದಿತ ಗುರಿ ಸಾಧಿಸಲಾಗಿದೆ. ಸಖಿ(ಒನ್ ಸ್ಟಾಪ್) ಕೇಂದ್ರದಲ್ಲಿ 24*7 ಕಾರ್ಯ ನಿರ್ವಹಿಸಲು ಶುಶ್ರೂಷಕರ ಅಗತ್ಯವಿದೆ ಎಂದರು.
ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ಅಧಿಕಾರಿ/ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಹಾಗೂ ಯೋಜನೆಗಳು ಎಲ್ಲ ಅರ್ಹರಿಗೆ ತಲುಪಿಸಬೇಕು. ಕೋವಿಡ್ ಸಂಕಷ್ಟದಲ್ಲಿಯೂ ನಿಯಮಾವಳಿಗಳನ್ನು ಪಾಲಿಸಿ ಯಾರಿಗೂ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕೆಂದರು.
ಸಭೆಯಲ್ಲಿ ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ, ಎಲ್ಲಾ ತಾಲ್ಲೂಕುಗಳ ಸಿಡಿಪಿಓ, ವಿವಿಧ ಯೋಜನೆಗಳ ಅನುಷ್ಟಾನ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಪದಾಧಿಕಾರಿಗಳು, ಪಾಲನಾ ಸಂಸ್ಥೆ ಮತ್ತು ಸ್ವಾಧಾರ ಗೃಹಗಳ ಸಿಬ್ಬಂದಿಗಳು ಹಾಜರಿದ್ದರು.
(ಫೋಟೊ ಇದೆ)