ಶಿವಮೊಗ್ಗ, ಸೆಪ್ಟಂಬರ್. 20 : ಜಿಲ್ಲೆಯ ನೆರೆ ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡುವಂತೆ ಹಾಗೂ ಅಂತಹ ಕುಟುಂಬಗಳಿಗೆ ಹೊಸ ಪಡಿತರ ಕೂಪನ್ ನೀಡುವಂತೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ.ಕಾಂತೇಶ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನೆರೆ ಸಂತ್ರಸ್ಥ ಕುಟುಂಗಳಲ್ಲಿನ ವಿದ್ಯಾರ್ಥಿಗಳ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳೂ ಕೂಡ ನಾಶವಾಗಿರುವುದು ತಿಳಿದಿದ್ದು, ಅಂತಹ ಮಕ್ಕಳಿಗೂ ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಕೂಡಲೆ ವಿತರಿಸುವಂತೆ ಸೂಚಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೊರೆಸಿಕೊಡಬೇಕಾದ ಕೊಳವೆಬಾವಿಗಳು ಪೂರ್ಣಗೊಳ್ಳದೇ ದಿನಕಳೆಯುತ್ತಿದೆ. ಸಂಬಂಧಿಸಿದ ನಿಗಮಗಳ ಜಿಲ್ಲಾ ಅಧಿಕಾರಿಗಳು ಈ ವಿಷಯದ ಕಡೆಗೆ ಸೂಕ್ತ ಗಮನಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸದುದ್ದೇಶದಿಂದ ಕೋಟ್ಯಾಂತರ ರೂ.ವೆಚ್ಚದಲ್ಲಿ ಜಿಲ್ಲೆಯ 255ಆಯ್ದ ಪ್ರದೇಶಗಳಲ್ಲಿ ಆರಂಭಿಸಲು ಸೂಚಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವು ದುರಸ್ತಿಯಲ್ಲಿದ್ದರೆ, ಇನ್ನೂ ಕೆಲವು ಕಾರ್ಯಾರಂಭ ಮಾಡದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿಬರುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಾರ್ಯನಿರ್ವಹಿಸಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಗಾಜನೂರು ಸೇರಿದಂತೆ ಜಿಲ್ಲೆಯ ವಿವಿದೆಡೆ ಇರುವ ಮುರಾರ್ಜಿ ದೇಸಾಯಿ, ಹಿಂದುಳಿದ ವರ್ಗಗಳ ವಸತಿಶಾಲೆಯಲ್ಲಿನ ಮಕ್ಕಳ ಅಗತ್ಯಕ್ಕೆ ಮೂಲಭೂತ ಸೌಕರ್ಯ ಕೊರತೆ ಇರುವ ಬಗ್ಗೆ ಅಹವಾಲುಗಳು ಆಗಾಗ್ಗೆ ಕೇಳಿ ಬರುತ್ತಿವೆ. ಅಲ್ಲದೆ ಎಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟ ನಂತರವೂ ಅಲ್ಲಿನ ಮಕ್ಕಳ ಪರೀಕ್ಷಾ ಫಲಿತಾಂಶ ನಿರಾಶಾದಾಯಕವಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡಲೇ ಗಮನಹರಿಸಿ ವಸತಿಶಾಲೆಯ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣ ಪ್ರದೇಶದಲ್ಲಿನ ಮಕ್ಕಳು ಮಾನಸಿಕ ವಿಕಾರಗಳಿಗೊಳಗಾಗುವ ಮೊಬೈಲ್ ಗೇಮ್ನಂತಹ ವ್ಯಸನಗಳಿಗೆ ಬಲಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಭದ್ರಾವತಿ ಮತ್ತು ಶಿವಮೊಗ್ಗ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗಾಗಿ ತಜ್ಞ ವೈದ್ಯರಿಂದ ಒಂದು ದಿನದ ಪರಿವರ್ತನಾ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ಮಾಹೆಯಲ್ಲಿ ಬಿದ್ದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಗೊಳಗಾಗಿದೆ. ಹಾನಿಯ ಪ್ರಮಾಣ ಮತ್ತು ಸಂತ್ರಸ್ಥ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಜಂಟಿ ಕೃಷಿ ನಿರ್ದೇಶಕ ಡಾ||ಕಿರಣ್ಕುಮಾರ್ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 15,573ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿರುವುದನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸುಮಾರು 19,000ರೈತರು ಪರಿಹಾರ ಧನ ನೀಡುವಂತೆ ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ 1710ಹೆಕ್ಟೇರ್ ಬೆಳೆಹಾನಿಗೊಳಗಾದ ಪ್ರದೇಶದಲ್ಲಿನ ರೈತರಿಗೆ 1.46ಕೋಟಿ ರೂ. ಪರಿಹಾರಧನ ವಿತರಿಸಲಾಗಿದೆ ಎಂದರು.
ಅಲ್ಲದೇ ಕಳೆದ ಮಾಹೆಯಲ್ಲಿ ಶಿಕಾರಿಪುರದಲ್ಲಿ ರಸಗೊಬ್ಬರ ವಿತರಣೆಯಲ್ಲಿ ಅಲ್ಪ ಮಟ್ಟಿನ ವ್ಯತ್ಯಯ ಉಂಟಾಗಿತ್ತು. ಕೂಡಲೇ ರಸಗೊಬ್ಬರವನ್ನು ತರಿಸಿ, ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ವಿತರಿಸಲಾಗಿದೆ. ಪ್ರಸ್ತುತ ಜಿಲ್ಲೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆಬೀಜ ದಾಸ್ತಾನಿದೆ ಎಂದವರು ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನ್ಯ ಸಿಬ್ಬಂಧಿಯನ್ನು ಸಭೆಗೆ ನಿಯೋಜಿಸದೇ ಅಧಿಕಾರಿಗಳೇ ಖುದ್ದಾಗಿ ಅಗತ್ಯ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಗನಾಯ್ಕ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.