ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಹಾಗೂ ಕೇಂದ್ರ, ರಾಜ್ಯ ಸರ್ಕಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.
ಹಕ್ಕುಪತ್ರ ವಿತರಣೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಸಂತ್ರಸ್ತರ ಬದುಕು ಅತಂತ್ರವಾಗಿದೆ. ಹಕ್ಕುಪತ್ರ ವಿತರಣೆ ವಿಷಯ ಕುರಿತು ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ತನ್ನ ನಿಲುವು ಸಮರ್ಥಿಸಿಕೊಳ್ಳಬೇಕಿತ್ತು. ಸಂತ್ರಸ್ತರ ಪರವಾಗಿ ಧ್ವನಿಯಾಗಬೇಕಿತ್ತು ಎಂದು ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಯಾವುದೇ ಪಕ್ಷ ಆದರೂ ಸರಿ, ರಾಜಕೀಯ ಗಿಮಿಕ್ ನಡೆಸುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಮುಳುಗಡೆ ಸಂತ್ರಸ್ತರ ವಿಚಾರವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅಗತ್ಯವಾಗಿ ನಡೆಸಬೇಕಿರುವ ತಾಂತ್ರಿಕ ಪ್ರಕ್ರಿಯೆಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಸತೀಶ್, ಗ್ರಾಮಸ್ಥರಾದ ಬಸಪ್ಪಗೌಡ, ಸತೀಶ್, ಸುರೇಶ್, ಪ್ರದೀಪ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.