ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 5500 ಕುಟುಂಬಗಳು ನೆರೆಬಾಧಿತ ಎಂದು ಗುರುತಿಸಲಾಗಿದ್ದು, 2400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10ಸಾವಿರ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳ ಸಮೀಕ್ಷೆ ಕಾರ್ಯ ಮಾಡಲಾಗಿದೆ. 492 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದ್ದು, 5ಲಕ್ಷ ರೂ. ಪರಿಹಾರ ಒದಗಿಸಲಾಗುವುದು. ಶೇ.25ರಷ್ಟು ಸಣ್ಣಪುಟ್ಟ ಹಾನಿಗೆ 25ಸಾವಿರ ರೂ ಹಾಗೂ ಶೇ.25ರಿಂದ 75ರಷ್ಟು ಹಾನಿಗೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. 3ಸಾವಿರ ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆ ಕಟ್ಟಲು ಅಸಮರ್ಥರಾದವರಿಗೆ ಜಿಲ್ಲಾಡಳಿತದ ವತಿಯಿಂದ ಮನೆ ನಿರ್ಮಿಸಿ ನೀಡಲಾಗುವುದು ಎಂದು ಹೇಳಿದರು.
10ತಿಂಗಳ ಬಾಡಿಗೆ ಮೊತ್ತ ಪಾವತಿ: ಪ್ರವಾಹದಲ್ಲಿ ಮನೆಯನ್ನು ಸಂಪೂರ್ಣವಾಗಿ ಕಳೆದುಕೊಂಡು 5ಲಕ್ಷ ರೂ. ಪರಿಹಾರಕ್ಕೆ ಅರ್ಹರಾದ ಕುಟುಂಬಗಳಿಗೆ ಮಾಸಿಕ 5ಸಾವಿರ ರೂ. ಬಾಡಿಗೆ ಹಣವನ್ನು ಪಾವತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ರೀತಿ ಬಾಡಿಗೆ ಹಣವನ್ನು ಗರಿಷ್ಟ 10ತಿಂಗಳಿಗೆ ಸೀಮಿತಗೊಳಿಸಿ, ಮನೆಯನ್ನು ಮತ್ತೆ ನಿರ್ಮಿಸುವವರೆಗೆ ತಾತ್ಕಾಲಿಕ ವಸತಿಗಾಗಿ ನೀಡಲಾಗುವುದು. ಒಂದು ವೇಳೆ ನಿರ್ವಸಿತ ಕುಟುಂಬ 10ತಿಂಗಳ ಅವಧಿಗೆ ಮುಂಚಿತವಾಗಿ ಮನೆ ನಿರ್ಮಿಸಿದರೆ, ಬಾಕಿ ಅವಧಿಯ ಬಾಡಿಗೆ ಮೊತ್ತವನ್ನು ಒಂದೇ ಕಂತಿನಲ್ಲಿ ಆ ಕುಟುಂಬಕ್ಕೆ ನೀಡಲಾಗುವುದು. ಪರ್ಯಾಯವಾಗಿ ನಿರ್ವಸಿತ ಕುಟುಂಬ ತಾತ್ಕಾಲಿಕ ತಗಡಿನ ಶೆಡ್ ವಸತಿ ನಿರ್ಮಾಣ ಮಾಡಿಕೊಂಡಲ್ಲಿ ಅವರಿಗೆ 50ಸಾವಿರ ರೂ. ನೀಡಲಾಗುವುದು. ಪ್ರವಾಹ ಪೀಡಿತ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಪರಿಹಾರದ ಮೊದಲ ಕಂತನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಾಡಿಗೆ ಮನೆಯಲ್ಲಿದ್ದು ಮನೆ ಕಳೆದುಕೊಂಡಿರುವವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇವರಿಗೆ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸುವ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಅವರು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾನಿ ವಿವರ: ಅತಿವೃಷ್ಟಿ ಹಾಗೂ ಪ್ರವಾಹದಿಂದ 70 ಜಾನುವಾರುಗಳು ಹಾಗೂ 23ಸಾವಿರ ಕೋಳಿ ಸಾವಿಗೀಡಾಗಿವೆ. ಇವುಗಳ ಮಾಲಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ನೀಡುವ ಕಾರ್ಯ ಚಾಲನೆಯಲ್ಲಿದೆ. ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 10ಮಂದಿ ಸಾವಿಗೀಡಾಗಿದ್ದು, ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಎರಡು ಮೃತದೇಹಗಳಿಗಾಗಿ ಎನ್‍ಡಿಆರ್‍ಎಫ್ ತಂಡ ಇನ್ನೂ ಹುಡುಕಾಟ ಮುಂದುವರೆಸಿದೆ ಎಂದು ಅವರು ಹೇಳಿದರು.
ಶಾಶ್ವತ ಪರಿಹಾರ ಪರಿಶೀಲನೆ: ಶಿವಮೊಗ್ಗ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳು ಪದೇ ಪದೇ ನೆರೆಗೆ ತುತ್ತಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ: ನೆರೆಯ ಬಳಿಕ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಕ್ಲೋರಿನೇಶನ್, ಕೀಟನಾಶಕ ಸಿಂಪಡಿಕೆ ಕಾರ್ಯವನ್ನು ಯುದ್ದೋಪಾಧಿಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕರಿಂದ ಉತ್ತಮ ಸಹಕಾರ: ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಾರ್ವಜನಿಕರು, ಅನೇಕ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಿದ್ದಾರೆ. ಕೆಲವು ಸಾಹಸ ಅಕಾಡೆಮಿ ಸದಸ್ಯರು ಬೋಟ್‍ಗಳೊಂದಿಗೆ ಬಂದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಎಲ್ಲರ ಸಹಕಾರದಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ. ಪರಿಹಾರ ಕಾರ್ಯದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

error: Content is protected !!