ಶಿವಮೊಗ್ಗ ನವೆಂಬರ್ 10 : ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾದ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರೀಕರ ಸಬಲೀಕರಣದ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಚಾಲನೆ ನೀಡಿದರು.
ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯಗಳಲ್ಲಿ ನಾಗರೀಕರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಿ.ಪಂ ಆವರಣದಲ್ಲಿ ಪ್ರದರ್ಶಿಸಲಾದ ವಿವಿಧ ಇಲಾಖೆಗಳ ಸುಮಾರು 22 ಮಳಿಗೆಗಳನ್ನು ಉದ್ಘಾಟಿಸಿ ಸವಿವರವಾದ ಮಾಹಿತಿಯನ್ನು ಪಡೆದುಕೊಂಡರು.
ಈ ವೇಳೆ ಅವರು ಮಾತನಾಡಿ, ಸರ್ಕಾರದಿಂದ ನಾಗರೀಕರಿಗೆ ಯಾವೆಲ್ಲ ರೀತಿಯ ಯೋಜನೆಗಳು, ಸೌಲಭ್ಯಗಳು ದೊರೆಯುತ್ತಿವೆ ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಹುಟ್ಟುವ ಮಕ್ಕಳಿಂದ ಹಿಡಿದು ಹಿರಿಯ ಜೀವಿಗಳವರೆಗೆ ಸರ್ಕಾರ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣದೊಂದಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯಾರ್ಥಿನಿಲಯಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಹೀಗೆ ಹಲವಾರು ಇಲಾಖೆಗಳು ನಾಗರೀಕರ ಅಭಿವೃದ್ದಿಗೆ ಅಗತ್ಯವಾದ ಯೋಜನೆ, ಸೌಲಭ್ಯಗಳನ್ನು ನೀಡುತ್ತಿದೆ.
ಸಮಾಜದ ಏಳ್ಗೆಗೆ ಶಿಕ್ಷಣ ಬಹಳ ಮುಖ್ಯ. ಎಲ್ಲಿ ಶಾಲೆಯ ಬಾಗಿಲು ತೆರೆಯುತ್ತದೋ ಅಲ್ಲಿ ಜೈಲಿನ ಬಾಗಿಲು ಮುಚ್ಚುತ್ತದೆ. ಶಿಕ್ಷಣದ ಸದುಪಯೋಗ ಮಾಡಿಕೊಂಡರೆ ಅಪರಾಧಿಗಳು ಸೃಷ್ಟಿಯಾಗುವುದಿಲ್ಲ. ಬದಲಾಗಿ ಒಳ್ಳೆಯ ನಾಗರೀಕರಾಗಿ ಹೊರಹೊಮ್ಮಿ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ಸೇರಿ ಉತ್ತಮ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.
ವಸ್ತು ಪ್ರದರ್ಶನದಲ್ಲಿ ಸ್ವಚ್ಚ ಭಾರತ್ ಮಿಷನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕೆ, ಪಶುಪಾಲನೆ, ಯುವ ಸಬಲೀಕರಣ, ಕೃಷಿ, ತೋಟಗಾರಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿರ್ಮಿತಿ ಕೇಂದ್ರ ಹೀಗೆ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಯೋಜನೆಗಳ ಕುರಿತಾದ ಕರಪತ್ರ, ಪೋಸ್ಟರ್, ವಸ್ತುಗಳ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸಿಇಓ ಎನ್.ಡಿ.ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಾನು.ಕೆ.ಎಸ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಮಟ್ಟದ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
