News Next

ಶಿವಮೊಗ್ಗ, ಮಾರ್ಚ್ 29 : ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ನೇಮಕಾತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವವರನ್ನು ಗುರುತಿಸಿ, ಅವರ ವೃತ್ತಿಯಿಂದ ಮುಕ್ತಗೊಳಿಸಿ ಸರ್ಕಾರದಿಂದ ನಿಗದಿಗೊಳಿಸಿದ ವಸತಿ ಸೌಲಭ್ಯ, ಶಿಕ್ಷಣ, ಸೇರಿದಂತೆ ಇತರ ಪುನರ್ ವಸತಿ ಸೌಲಭ್ಯಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸಗಳು ಶೀಘ್ರವಾಗಿ ಜಾರಿಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸುತ್ತಿರುವ ಕುರಿತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮನುಷ್ಯನ ಬದಲಾಗಿ ಮಿಷನ್‍ಗಳ ಸಹಾಯದಿಂದಲೇ ಶೌಚಾಲಯ, ತೆರೆದ ಗುಂಡಿಗಳು ಮತ್ತು ಒಳ ಚರಂಡಿಗಳನ್ನು ಸ್ವಚ್ಚಗೊಳಿಸಬೇಕು. ಇದರಿಂದ ದುರ್ಘಟನೆಗಳು ನಡೆಯುವುದನ್ನು ತಡೆಯಬಹುದು ಮತ್ತು ಜಾಡಮಾಲಿಗಳನ್ನು ಈ ವೃತ್ತಿಯಿಂದ ಮುಕ್ತಗೊಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಗರ ಉಪಕಾರ್ಯನಿರ್ವಹಕ ಅಧಿಕಾರಿ ನಾಗರಾಜ್ ಮಾತನಾಡಿ ಜಾಡಮಾಲಿಗಳಿಗೆ ಗೌರವಯುತ ಬದುಕನ್ನು ಕಟ್ಟಿ ಕೊಡಬೇಕು. ಇವರು ಶೌಚಾಲಯ ತೆರೆದ ಗುಂಡಿ, ಮತ್ತು ಒಳ ಚರಂಡಿಗಳನ್ನು ದೈಹಿಕವಾಗಿ ಸ್ವಚ್ಛ ಗೊಳಿಸುವುದನ್ನು ತಡೆಯಬೇಕು. ಅಲ್ಲದೇ ಮ್ಯಾನುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ ವಸತಿ ಅಧಿನಿಯಮ-2013 ರನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಣತಿಯು ಏಪ್ರಿಲ್ 18ರ ಒಳಗಾಗಿ ನಡೆಯಬೇಕು. ಮಹಾನಗರ ಪಾಲಿಕೆ/ನಗರ ಸಭೆ/ಪುರ ಸಭೆ/ಪಟ್ಟಣ ಪಂಚಾಯತ್/ಗ್ರಾಮ ಪಂಚಾಯತ್ ಗಳ ಸಮೀಕ್ಷಾ ತಂಡದ ಪ್ರತಿನಿಧಿಗಳು ನಗರ/ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ಅಲ್ಲದೇ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳು ತಾವಾಗಿಯೇ ಖುದ್ದಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಹಾಜರಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕಲ್ಲಪ್ಪ, ಜಿಲ್ಲಾ ನಗರ ಕೋಶಾಭಿವೃದ್ಧಿ ಇಂಜಿನಿಯರ್ ಲಿಂಗರಾಜು, ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಪಂಚಾಯತ್‍ನ ಪಿಡಿಒಗಳು ಉಪಸ್ಥಿತರಿದ್ದರು.

error: Content is protected !!