ಶಿವಮೊಗ್ಗ : ಜೂನ್ 21 : ನಗರದ ಸರ್ಕಾರಿ ಶಾಲೆಗಳ ವಿಕಾಸಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗಂದ ನಿರೀಕ್ಷಿತ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಶಾಲೆಗಳ ವಿಕಾಸ ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಲಭ್ಯವಾಗಬಹುದಾದ ಸರ್ಕಾರದ ಅನುದಾನದೊಂದಿಗೆ ಮಹಾನಗರಪಾಲಿಕೆ ಹಾಗೂ ಸ್ಥಳೀಯ ದಾನಿಗಳ ಸಹಯೋಗದೊಂದಿಗೆ ನಗರದ ಸರ್ಕಾರಿ ಶಾಲೆಗಳ ಉನ್ನತಿಗೆ ಯತ್ನಿಸಲಾಗುವುದು ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯಾಲಯದಲ್ಲಿ ಸರ್ಕಾರಿ ಶಾಲೆಗಳ ವಿಕಾಸಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಹಾಯಹಸ್ತ ನೀಡಿರುವ ನಗರದ ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈಗಾಗಲೇ ನಗರದ ಸರ್ಕಾರಿ ಶಾಲೆಗಳಲ್ಲಿನ ಕುಂದುಕೊರತೆಗಳು, ಸಮಸ್ಯೆಗಳು, ನಿರೀಕ್ಷೆಗಳು, ಶೌಚಾಲಯ, ಕುಡಿಯುವ ನೀರು, ಕಟ್ಟಡ ದುರಸ್ತಿ, ಶಾಲಾ ಕಾಂಪೌಂಡ್, ಸುಣ್ಣಬಣ್ಣ ಮುಂತಾದವುಗಳ ಕುರಿತು ಆಯಾ ಶಾಲೆಗಳ ಮುಖ್ಯಸ್ಥರು ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಂದ ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಅದರ ಖರ್ಚು-ವೆಚ್ಚದ ಕುರಿತು ಪ್ರಸ್ತಾವನೆಯನ್ನು ತಯಾರಿಸಲಾಗಿದ್ದು, ಅಂದಾಜುಪಟ್ಟಿಯಂತೆ ಆದ್ಯತೆಯನುಸಾರ ದಾನಿಗಳಿಂದ ಸಿಗುವ ಅನುದಾನದಿಂದ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ನಗರದ ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗಾಗಿ ಮಹಾನಗರಪಾಲಿಕೆ ವತಿಯಿಂದ 2ಕೋಟಿ ರೂ.ಗಳ ಅನುದಾನ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಶಾಲೆಗಳ ಶೌಚಾಲಯಗಳ ದುರಸ್ತಿಗಾಗಿ ಪ್ರತ್ಯೇಕ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ರೂಪಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶಿತ ಕಾರ್ಯಕ್ಕೆ ರೌಂಡ್‍ಟೇಬಲ್ ಸಂಸ್ಥೆಯು 20ಲಕ್ಷ ರೂ.ಗಳ ಸಹಾಯಧನ ನೀಡಲಿದೆ. ಇದಕ್ಕೆ ಸಹಕಾರಿಯಾಗಿ ಸಮಾನನಿಧಿಯನ್ನು ಒದಗಿಸಿದಲ್ಲಿ ಸುಮಾರು 40ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಇದಲ್ಲದೆ ಎನ್.ಇ.ಎಸ್. ಶಿಕ್ಷಣ ಸಂಸ್ಥೆ, ನಗರದ ಉದ್ಯಮಿಗಳ ಒಕ್ಕೂಟದಿಂದಲೂ ಅಗತ್ಯ ಆರ್ಥಿಕ ಸಹಕಾರ ನೀಡುವರು. ಅಲ್ಲದೇ ಈ ಮಹತ್ವದ ಕಾರ್ಯಕ್ಕೆ ಸರ್ಕಾರಿ ನೌಕರರ ಸಂಘವು ಸಹಾಯಹಸ್ತ ನೀಡಲಿದೆ ಎಂದರು. ಅದಕ್ಕೆ ಸಂಬಂಧಿಸಿದಂತೆ ಶಾಲಾ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಕೆ.ಎಸ್.ಈಶ್ವರಪ್ಪ ಅವರು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ಜೂನ್ 29ರಂದು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಶಾಲೆಗಳ ವಿಕಾಸದ ಕುರಿತು ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಮಹಾನಗರಪಾಲಿಕೆ ಉಪಮೇಯರ್ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸುಮಂಗಳಾ ಪಿ.ಕುಚಿನಾಡ, ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ವರಪ್ಪ ಸೇರಿದಂತೆ ಸ್ಥಳೀಯ ಸಂಘಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ದಾನಿಗಳು ಉಪಸ್ಥಿತರಿದ್ದರು.

error: Content is protected !!