ಶಿವಮೊಗ್ಗ, ಮಾರ್ಚ್ 03: ಶಿವಮೊಗ್ಗ ನಗರದಲ್ಲಿ ಮಾರ್ಚ್ 6 ರಿಂದ 9 ರವರೆಗೆ ಪಲ್ಸ್ ಪೋಲೀಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ತಿಳಿಸಿದರು.
ಇಂದು ಮಹಾನಗರಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಲ್ಸ್ ಪೊಲೀಯೋ ಲಸಿಕಾಕರಣ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಾದ್ಯಂತ ಏಕ ಕಾಲದಲ್ಲಿ ಫೆ.27 ರಂದು ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದ ಕಾರಣ ಲಸಿಕಾಕರಣವನ್ನು ಮಾರ್ಚ್ 6 ಕ್ಕೆ ಮುಂದೂಡಲಾಗಿತ್ತು.
ಮಾರ್ಚ್ 6 ರಂದು ನಗರದ ಒಟ್ಟು 104 ಬೂತ್ಗಳಲ್ಲಿ ಲಸಿಕೆ ಹಾಕಲಾಗುವುದು ಮತ್ತು 7 ರಿಂದ 9 ರವರೆಗೆ ಮನೆ ಮನೆ ಭೇಟಿ ನೀಡಿ ಲಸಿಕೆ ನೀಡಲಾಗುವುದು. ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಾಲಿಕೆ, ರೋಟರಿ ಮತ್ತು ಇತರೆ ಸಂಘ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯ ಎಂದಿಗೂ ಉತ್ತಮವಾಗಿದ್ದು, ಈ ಬಾರಿಯೂ ಎಲ್ಲರ ಸಮನ್ವಯದಿಂದ ಲಸಿಕಾಕರಣ ಯಶಸ್ವಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು ನಗರ ಭಾಗದಲ್ಲಿ ಮಾತ್ರ ಮುಂದೂಡಲ್ಪಟ್ಟ ಲಸಿಕಾಕರಣದ ಕುರಿತು ಜನರಿಗೆ ಮಾಹಿತಿ ಒದಗಿಸಲು ಅಗತ್ಯವಾದ ಆಟೋ, ಮೈಕ್, ಜಿಂಗಲ್ ಇತರೆ ಮೂಲಕ ಪ್ರಚಾರ ಮತ್ತು ಬೂತ್ ರಚನೆ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಯನ್ನು ಪಾಲಿಕೆ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.
ಆರ್ಸಿಹೆಚ್ಓ ಡಾ. ನಾಗರಾಜನಾಯ್ಕ್ ಮಾತನಾಡಿ, ಪೊಲೀಯೋ ಲಸಿಕಾಕರಣ ಮುಂದೂಡಲ್ಪಟ್ಟ ಬಗ್ಗೆ ನಗರದ ಎಲ್ಲ ಜನತೆಗೆ ಮಾಹಿತಿ ತಲುಪಬೇಕು. ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 29000 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಗ್ರಾಮೀಣ ಭಾಗದಲ್ಲಿ ಶೇ.99 ಪ್ರಗತಿ ಸಾಧಿಸಲಾಗಿದೆ. ಇನ್ನು ನಗರದ ಭಾಗದ 18586 ಮಕ್ಕಳಿಗೆ ಲಸಿಕೆ ಹಾಕುವುದು ಬಾಕಿ ಇದ್ದು ಮುಖ್ಯವಾಗಿ ಜನರಿಗೆ ಮಾರ್ಚ್ 6 ರಿಂದ 9 ರವರೆಗಿನ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ, ಪ್ರಚಾರ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಲಸಿಕಾಕರಣ ಮುಗಿದಿದ್ದು ನಗರ ಭಾಗದಲ್ಲಿ ಮುಂದೂಡಲಾದ ಪೊಲೀಯೋ ಕಾರ್ಯಕ್ರಮದ ಕುರಿತು ಜನರಿಗೆ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ, ಇಲಾಖೆಗಳು ಮತ್ತು ರೋಟರಿಯಂತಹ ಸಂಘಸಂಸ್ಥೆಗಳ ಸಹಕಾರ ಅತಿ ಮುಖ್ಯವಾಗುತ್ತದೆ ಎಂದರು.
ಡಬ್ಲ್ಯುಹೆಚ್ಓ ಕನ್ಸಲ್ಟೆಂಟ್ ಫಾರ್ ಇಮ್ಯುನೈಸೇಷನ್ ಡಾ.ಸತೀಶ್ಚಂದ್ರ ಮಾತನಾಡಿ ನಗರ ಭಾಗದಲ್ಲಿ ಲಸಿಕಾಕರಣ ಮುಂದೂಡಲ್ಪಟ್ಟಿರುವುದರಿಂದ ಶೇ.100 ಗುರಿ ಸಾಧಿಸುವಲ್ಲಿ ಹೆಚ್ಚಿನ ಗಮನ ಹರಿಸಿ ಶ್ರಮ ಹಾಕಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ರೋಟರಿ ಪಾತ್ರ ಯಾವತ್ತೂ ಅತ್ಯುತ್ತಮವಾಗಿದ್ದು ಈ ಬಾರಿ ವಿಶೇಷವಾಗಿ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಡಾ.ಪಿ.ನಾರಾಯಣ್ ಮಾತನಾಡಿ, ಪೊಲೀಯೋ ಮುಕ್ತ ವಿಶ್ವದ ಕನಸು ನನಸಾಗುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲರ ಶ್ರಮ ಇದೆ. ಶಿವಮೊಗ್ಗದಲ್ಲಿ 7 ರೋಟರಿ ಕ್ಲಬ್ ಇದ್ದು, ಪೊಲೀಯೋ ನಿರ್ಮೂಲನ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ. ಮಾರ್ಚ್06 ರಿಂದ 9 ರವರೆಗೆ ನಡಿಸುವ ಪೋಲೀಯೋ ಲಸಿಕೆ ಕಾರ್ಯಕ್ರಮದಲ್ಲಿ ತಮ್ಮ ಕ್ಲಬ್ಗಳ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಅಗತ್ಯ ವ್ಯವಸ್ಥೆಗಳನ್ನು ಸಹ ಮಾಡಿಕೊಡಲಾಗುವುದು. ಲಸಿಕೆ ದಿನಾಂಕ ಮುಂದೂಡಿದ ಕಾರಣ ಸ್ವಲ್ವ ಹೆಚ್ಚಿನ ಶ್ರಮ ವಹಿಸಬೇಕಾಗುವುದು ಎಂದು ಹೇಳಿದರು.
ಸಭೆಯಲ್ಲಿ ರೋಟರಿ ಸಹಾಯಕ ಗರ್ವನರ್ ಆನಂದಮೂರ್ತಿ, ವಿವಿಧ ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು, ವೈದ್ಯರು ಹಾಜರಿದ್ದರು.