ಶಿವಮೊಗ್ಗ, ಆಗಸ್ಟ್ 10 : ಆಗಸ್ಟ್ 12ರಿಂದ 25ರವರೆಗೆ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ಅವ್ಯವಹಾರಕ್ಕೆ ಅವಕಾಶವಾಗದಂತೆ ಪಾರದರ್ಶಕವಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪೂರ್ವಸಿದ್ಧತಾ ಸಭೆ ನಡೆಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಕೇಂದ್ರಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯಲು ಅವಕಾಶ ನೀಡಬಾರದು. ಪರೀಕ್ಷಾ ಕೇಂದ್ರದ ಸುತ್ತಲಿನ 200ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಈ ವಲಯದ ಒಳಗೆ ಪರೀಕ್ಷಾರ್ಥಿಗಳು ಮತ್ತು ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಬಿಡಬಾರದು ಎಂದು ಅವರು ಹೇಳಿದರು.
ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ಪ್ರತಿ ತಾಲೂಕಿನಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ತಹಶೀಲ್ದಾರ್, ಬಿಇಒ ಮತ್ತು ಪ್ರಾಂಶುಪಾಲರು ಸದಸ್ಯರಾಗಿರುವರು. ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವ ವಾಹನಕ್ಕೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯುತ್ ವ್ಯತ್ಯಯ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಸಾಗಿಸುವ ವಾಹನದೊಂದಿಗೆ ಸೂಕ್ತ ಪೊಲೀಸ್ ಬಂದೋಬಸ್ತು ಮಾಡಬೇಕು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿಗಳ ವಿವರ: ಈ ಬಾರಿ ಜಿಲ್ಲೆಯಲ್ಲಿ ಒಟ್ಟು 3802 ವಿದ್ಯಾರ್ಥಿಗಳು ಪಿಯುಸಿ ಪೂರಕ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ಶಿವಮೊಗ್ಗ 1243, ಭದ್ರಾವತಿ 624, ತೀರ್ಥಹಳ್ಳಿ 272, ಹೊಸನಗರ 190, ಸಾಗರ 568, ಸೊರಬ 364 ಮತ್ತು ಶಿಕಾರಿಪುರ ತಾಲೂಕಿನ 541 ವಿದ್ಯಾರ್ಥಿಗಳು ಇದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಎಎಸ್ಪಿ ಡಾ.ವಿಕ್ರಮ್ ಅಮಟೆ, ಡಿಎಫ್‍ಒ ಶಿವಶಂಕರ್, ಹಿರಿಯ ಭೂ ವಿಜ್ಞಾನಿ ವಿಂಧ್ಯಾ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.