ಶಿವಮೊಗ್ಗ, ಫೆಬ್ರವರಿ 19 : ಮಾರ್ಚ್ 04ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನಿಂದ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಒಳಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಪರೀಕ್ಷಾ ಮೇಲ್ವಿಚಾರಕರು ಸಹ ಮೊಬೈಲ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯಬಾರದು. ಪ್ರತಿ ಕೊಠಡಿಯಲ್ಲಿ ಗಡಿಯಾರ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳ 200ಮೀಟರ್ ಸುತ್ತಮುತ್ತ ಪ್ರತಿಬಂಧಕಾಜ್ಞೆ ವಿಧಿಸಲಾಗುವುದು. ಪರೀಕ್ಷಾ ದಿನಗಳಂದು ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದು ಎಂದು ಅವರು ಹೇಳಿದರು.
ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪಡೆದ ಬಳಿಕ ಪರೀಕ್ಷಾ ಕೇಂದ್ರ ತಲುಪುವ ವರೆಗೆ ನಡುವೆ ಎಲ್ಲಿಯೂ ನಿಲ್ಲಿಸಬಾರದು. ಸಿಸಿಟಿವಿ ಸಮ್ಮುಖದಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಪರೀಕ್ಷೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪರೀಕ್ಷೆ ವಿವರ: ಜಿಲ್ಲೆಯಲ್ಲಿ ಈ ವರ್ಷ ಒಟ್ಟು 19748 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 8620 ವಿದ್ಯಾರ್ಥಿಗಳು ಹಾಗೂ 11128 ವಿದ್ಯಾರ್ಥಿನಿಯರು ಇದ್ದಾರೆ. ಇವರಲ್ಲಿ ಕಲಾ ವಿಭಾಗದಲ್ಲಿ 5808, ವಾಣಿಜ್ಯ 7490 ಮತ್ತು ವಿಜ್ಞಾನ ವಿಭಾಗದಲ್ಲಿ 6451 ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10911, ಅನುದಾನಿತ 2905 ಮತ್ತು ಅನುರಾನ ರಹಿತ ಕಾಲೇಜುಗಳಲ್ಲಿ 5758 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಒಟ್ಟು 33 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಶಿವಮೊಗ್ಗ 12, ಭದ್ರಾವತಿ 6, ತೀರ್ಥಹಳ್ಳಿ 3, ಹೊಸನಗರ 2, ಸಾಗರ 5, ಸೊರಬ 2 ಮತ್ತು ಶಿಕಾರಿಪುರದಲ್ಲಿ 3ಪರೀಕ್ಷಾ ಕೇಂದ್ರಗಳಿವೆ. ಒಟ್ಟು 11 ಮಾರ್ಗಗಳನ್ನು ಮಾಡಲಾಗಿದ್ದು, ಪ್ರತಿ ಮಾರ್ಗಕ್ಕೆ ಹಿರಿಯ ಅಧಿಕಾರಿಗಳ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಡಿಡಿಪಿಯು ಇಮ್ತಿಯಾಜ್ ಅಹ್ಮದ್ ಅವರು ಮಾಹಿತಿ ನೀಡಿದರು.
ಅಪರ ಜಿಲ್ಲಾದಿಕಾüರಿ ಅನುರಾಧ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.