ಶಿವಮೊಗ್ಗ: ದೇಶದ ಯುವಜನತೆಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿ. ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಯುವಪೀಳಿಗೆಗೆ ದಾರಿದೀಪ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಬಟಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಹೇಳಿದರು.
ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡು ಕಂಡ ಅಪ್ರತಿಮ ಶ್ರೇಷ್ಠ ಸಂತ, ಚಿಕಾಗೋದ ಭಾಷಣದಿಂದ ಯುವಜನರು ಪರಿವರ್ತನೆಗೊಂಡಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಜತೆಯಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದರು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಬಟಲ್ ಟ್ರಸ್ಟ್ ಖಜಾಂಚಿ ಜಿ.ವಿಜಯ್ ಕುಮಾರ್ ಮಾತನಾಡಿ, ಯುವ ಸಮೂಹ ಪ್ರತಿಯೊಂದು ರಾಷ್ಟ್ರಗಳ ದಿವ್ಯ ಸಂಪತ್ತು. ಯುವ ಸಮೂಹದ ಶಕ್ತಿ, ಸಾಮರ್ಥ್ಯಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಯುವಕರು ಆಧುನಿಕತೆ ಮತ್ತು ತಾಂತ್ರಿಕತೆಯ ಹರಿಕಾರರು ಹಾಗೂ ವಿಭಿನ್ನ ಕ್ಷೇತ್ರದಲ್ಲಿ ಕನಸುಗಳನ್ನು ಕಾಣುವ ಕನಸುಗಾರರು. ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯ ಮತ್ತು ಶ್ರಮಗಳ ಸಂಗಮವೇ ಯುವ ಸಮೂಹ. ಸ್ವಾಮಿ ವಿವೇಕರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರದಾದ್ಯಂತ ಸಂಭ್ರಮದಿಂದ ಆಚರಿಸಿ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿ ನಾಗವೇಣಿ ಎಸ್.ಆರ್. ಮಾತನಾಡಿ, ಸ್ವಾಮಿ ವಿವೇಕಾನಂದರ ಕೃತಿಗಳಲ್ಲಿ ಭೋಧಿಸಿದ ಕರ್ಮ ಯೋಗ, ರಾಜ ಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗಗಳ ಬಗ್ಗೆ ಇಂದಿನ ಯುವ ಜನರು ತಿಳಿದುಕೊಳ್ಳುವುದು ಒಳ್ಳೆಯದು ಎಂದರು.
ಈ ಸಮಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಬಿಡಿಸಲು ಹಾಗೂ ಸ್ವಾಮಿ ವಿವೇಕಾನಂದರ ಕುರಿತು ಪ್ರಬಂಧವನ್ನು ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಅತ್ಯುತ್ತಮವಾಗಿ ಚಿತ್ರ ಬಿಡಿಸಿದ ಮತ್ತು ಪ್ರಬಂಧವನ್ನು ಬರೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ರೋಟರಿ ಪೂರ್ವ ಆಂಗ್ಲ ಶಾಲೆಯ ಪ್ರಾಂಶುಪಾಲ ಸೂರ್ಯನಾರಾಯಣ್ ಆರ್., ರೋಟರಿ ಪೂರ್ವ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಶೀಲಾ ಬಾಯಿ ಎಸ್. ಮತ್ತು ರಮ್ಯ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.