ಶಿವಮೊಗ್ಗ, ಮಾರ್ಚ್ 09 : : ದೇಶದ ಆರ್ಥಿಕ ಸ್ಥಿತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಕೃಷಿಕ್ಷೇತ್ರ ಅತ್ಯಂತ ಸಹಕಾರಿಯಾಗಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಮಹಾನಿರ್ದೇಶಕ ಡಾ|| ತ್ರಿಲೋಚನ ಮಹಾಪಾತ್ರ ಅವರು ಹೇಳಿದರು.
ಅವರು ಇಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ವಿವಿಯ ಆವರಣದಲ್ಲಿ ಏರ್ಪಡಿಸಿದ್ದ 4ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಹಿಂದೊಂದು ಕಾಲದಲ್ಲಿ ಕೃಷಿ ಕ್ಷೇತ್ರ ಲಾಭದಾಯಕವಲ್ಲ. ಇದರಿಂದಾಗಿ ದೇಶದ ಭವಿಷ್ಯದ ದಿನಗಳು ಆತಂಕಕರವಾಗಿವೆ ಎಂಬ ಅಭಿಪ್ರಾಯ ಜನಜನಿತವಾಗಿತ್ತು. ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಗಿರಬಹುದಾದ ಅಸಾಧಾರಣ ಸಾಧನೆಗಳಿಂದಾಗಿ ಈ ಸಂಶಯ ಇನ್ನಿಲ್ಲವಾಗಿದೆ. ಮಾತ್ರವಲ್ಲ ದೇಶದ ಆರ್ಥಿಕ ಸ್ಥಿತಿಗತಿಗಳ ಸಮತೋಲನಕ್ಕೆ ಸಹಕಾರಿಯಾಗಿದೆ ಎಂದವರು ನುಡಿದರು.
ದೇಶ ಆಹಾರ ಭದ್ರತೆಯಲ್ಲಿ ಸ್ವಾಮ್ಯತೆ ಸಾಧಿಸಿದೆ ಎಂಬುದು ಸತ್ಯ. ದೇಶದ ರೈತರು ಬೆಳೆಯುವ ಬೆಳೆ ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಪೂರಕವಾಗಿರಬೇಕಲ್ಲದೇ ಪೌಷ್ಠಿಕಾಂಶಯುಕ್ತವಾಗಿರಬೇಕು ಎಂದ ಅವರು, ಇಲ್ಲಿ ಬೆಳೆಯುತ್ತಿರುವ ಅಕ್ಕಿ ಸುಮಾರು 40,000ಕೋಟಿ ರೂ.ಗಳ, ಅದರಲ್ಲೂ ವಿಶೇಷವಾಗಿ ಬಾಸುಮತಿ ಅಕ್ಕಿ ಸುಮಾರು 15,000ಕೋಟಿ ರೂ.ಗಳ ಮೌಲ್ಯದ ರಫ್ತು ವಾರ್ಷಿಕವಾಗಿ ಮಾಡಲಾಗುತ್ತಿದೆ. ಇಲ್ಲಿ ಬೆಳೆಯುವ ಕಬ್ಬು/ಸಕ್ಕರೆ ವಿದೇಶಕ್ಕೆ ರಫ್ತಾಗುತ್ತಿದ್ದು ಸುಮಾರು 7,000ಕೋಟಿ ರೂ.ಗಳ ವಹಿವಾಟು ಹೊಂದಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ಸಾಧನೆ ಅಗಾಧವಾದುದು. ಈ ಸಂಶೋಧನಾ ಚಟುವಟಿಕೆಗಳು ದೇಶದ ಆಹಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಕಾಲಕಾಲಕ್ಕೆ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರಿಂದ ದೇಶದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ತಂತ್ರಜ್ಞಾನಾಧಾರಿತ ವಿಷಯಗಳ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕೆಂದವರು ನುಡಿದರು.
ಮುಂದಿನ ದಿನಗಳಲ್ಲಿ ಭವಿಷ್ಯದ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ನಿಶ್ಚಯಿಸಿರುವ ಇಂದಿನ ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕರಣಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಪದವೀಧರರೂ ಕೂಡ ಸರ್ಕಾರಿ ಉದ್ಯೋಗವನ್ನೇ ಅವಲಂಬಿಸದೇ ಹಲವರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಿ ಪರಿವರ್ತನೆ ಹೊಂದಬೇಕೆಂದವರು ನುಡಿದರು.
ಕೃಷಿ ಕ್ಷೇತ್ರದ ವಿಕಾಸಕ್ಕೆ ಸವಾಲಾಗಿ ಪರಿಣಮಿಸಬಹುದಾದ ತಾಪಮಾನ, ಹವಾಮಾನ ಬದಲಾವಣೆ, ನೀರಿನ ಲಭ್ಯತೆ, ಬರ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತಿಸಬೇಕು. ಕಡಿಮೆ ನೀರು ಬಳಸಿ ಬೆಳೆಯುವ ಪೌಷ್ಠಿಕಾಂಶಯುಕ್ತ ಬೆಳೆಗಳ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ನಡೆಯುವ ಸಂಶೋಧನಾ ಚಟುವಟಿಕೆಗಳ ರೈತರ ಹೊಲಗಳವರೆಗೆ ವಿಸ್ತರಗೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಲಾಭದಾಯಕ ಉದ್ಯಮವಾಗಬೇಕು. ಕೃಷಿಕರ ಆರ್ಥಿಕವಾಗಿ ಬಲಿಷ್ಠರಾಗಬೇಕು. ಕೃಷಿಯಲ್ಲಿನ ಲಾಭ ದ್ವಿಗುಣಗೊಳ್ಳಬೇಕು. ಇದರಿಂದಾಗಿ ವಿಮುಖರಾಗಿರುವ ಬಹುಸಂಖ್ಯಾತರು ಕೃಷಿಯತ್ತ ಮರಳಿ ಬರುವ ಸಾಧ್ಯತೆ ಇದೆ ಎಂದವರು ನುಡಿದರು.
ರಾಜ್ಯ ಸರ್ಕಾರವು ಹೈನುಗಾರಿಕೆಗೆ ಉತ್ತೇಜನ ನೀಡಿದ್ದರಿಂದಾಗಿ ಹಾಗೂ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳಿಂದಾಗಿ ಹೈನು ಉತ್ಪಾದನೆಯಲ್ಲಿ ರಾಜ್ಯದ ಸಾಧನೆ ಅಸಾಧಾರಣವಾದುದಾಗಿದೆ ಅಂತೆಯೇ ಕಡಿಮೆ ನೀರು ಮತ್ತು ಎಲ್ಲಾ ಕಾಲಮಾನಗಳಲ್ಲಿ ಬೆಳೆಯಬಹುದಾದ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳ ಬೆಳೆಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ. ಇಂತಹ ಸಿರಿಧಾನ್ಯಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಅಳವಡಿಸಿಕೊಳ್ಳಬೇಕೆಂದ ಅವರು, ಕೃಷಿ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ, ಅವುಗಳ ಮಾರುಕಟ್ಟೆಗೆ, ಸಂಸ್ಕರಣೆಗೆ ಮುಂದಾಗುವಂತೆ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಅವರು ಎಲ್ಲರನ್ನೂ ಸ್ವಾಗತಿಸಿ ವಿವಿಯ ವರದಿ ವಾಚನ ಮಾಡಿದರು. ಈ ಸಂದರ್ಭದಲ್ಲಿ ವಿವಿಯ ಸಹಕುಲಾಧಿಪತಿ ಹಾಗೂ ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ, ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿಯ ನಿರ್ದೇಶಕರು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಪ್ರತಿಭಾವಂತ 22ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅವರಲ್ಲಿ ಮುಖ್ಯವಾಗಿ ವಿದ್ಯಾಶ್ರೀ ಎಸ್.-04, ಆಶ್ರಿತಾ ಕೆ.ಎನ್., ಮೇಘನಾ ಎನ್., ಚಂದನ್ ಜೆ.ಎಸ್., ರಾಣಿ ಜಯದುರ್ಗ ನಾಯಕ್, ದಯಾನಂದ ಪಾಟೀಲ್ ಇವರು ತಲಾ 02ಚಿನ್ನದ ಪದಕ ಪಡೆದರು.

error: Content is protected !!