ಶಿವಮೊಗ್ಗ, ಜನವರಿ 10 : ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಸ್ಮಾರ್ಟ್‍ಸಿಟಿ ಯೋಜನೆ ಆಡಳಿತ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರ ಪ್ರದೇಶದ ಕೆಲವೆಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಹಾಗೂ ಈ ಪೈಪ್‍ಲೈನ್‍ಗೆ ಕಲುಶಿತ ನೀರು ಸೇರುವ ಆತಂಕವಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೆಲಸ ನಡೆಯುವ ಸ್ಥಳಗಳಲ್ಲಿದ್ದು, ಕಾಮಗಾರಿಗಳು ನಿಯಮಾನುಸಾರ ನಡೆಯುವಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ನಿಯೋಜಿತ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊರೋನ ಸೋಂಕು ಇತ್ತೀಚಿನ ಕೆಲವು ದಿನಗಳಿಂದ ಹೆಚ್ಚಾಗುತ್ತಿದ್ದು, ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಲಸಿಕೆ ನೀಡುವ ಹಾಗೂ ಅವರ ನೆಮ್ಮದಿಯ ಬದುಕಿಗೆ ಭರವಸೆ ನೀಡುವಲ್ಲಿ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದ ಅವರು, ಪೂರ್ಣಗೊಂಡಿರುವ 28 ಕಾಮಗಾರಿಗಳ ಪ್ರದೇಶದಲ್ಲಿ ಇನ್ನೂ ಯಾವುದೇ ಕೆಲಸಗಳು ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದೇ ಜನವರಿ 16ರ ನಂತರ 3ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಈ ಸಂದರ್ಭದಲ್ಲಿ ಇನ್ನೂ ಸಣ್ಣಪುಟ್ಟ ಯಾವುದೇ ಕೆಲಸ ಬಾಕಿ ಇರುವ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹ ಅಧಿಕಾರಿಯ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಅವರು, ಜನವರಿ 19 ಮತ್ತು 20ರಂದು ಪ್ರಸ್ತುತ ನಗರದ ಹಲವೆಡೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಖುದ್ದು ಪರಿಶೀಲಿಸಲಾಗುವುದು ಎಂದ ಅವರು, ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡುವಂತೆಯೂ ಅವರು ಸೂಚಿಸಿದರು.
ಈಗಾಗಲೇ ಕುಡಿಯುವ ನೀರನ್ನು ದಿನದ ಪೂರ್ಣ ಅವಧಿಯಲ್ಲೂ ಒದಗಿಸುವ ಯೋಜನೆಯಡಿ ನಗರದ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ರಸೀದಿಯಲ್ಲಿ ಭಾರೀ ಪ್ರಮಾಣದಲ್ಲಿ ದರ ನಿಗಧಿಪಡಿಸಿರುವುದಕ್ಕೆ ಜನರಲ್ಲಿ ತೀವ್ರ ವಿರೋಧವಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸಿಬ್ಬಂಧಿಗಳು ಪ್ರತಿ ಮನೆಗೆ ಭೇಟಿ ನೀಡಿ, ಜನರಲ್ಲಿ ವಾಸ್ತವದ ಮನವರಿಕೆ ಮಾಡಿಕೊಡುವುದರ ಜೊತೆಗೆ ನೀರು ಬಳಕೆಯ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡು ನಿಗಧಿಪಡಿಸದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸದಿರುವ ಗುತ್ತಿಗೆದಾರರಿಗೆ ಸೂಕ್ತ ಎಚ್ಚರಿಕೆ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಬೇಕು. ತಪ್ಪಿದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಬೇಕು. ಅಲ್ಲದೇ ಅವರಿಗೆ ಬಾಕಿ ಹಣ ಪಾವತಿಸದಂತೆ ಕ್ರಮ ವಹಿಸಬೇಕೆಂದವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈವರೆಗೆ ಒಟ್ಟು 590.79ಕೋಟಿ ರೂ. ಅನುದಾನ ಮಂಜೂರಾಗಿದ್ದು, 473.74ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 983.42ಲಕ್ಷ ಅಂದಾಜಿನಲ್ಲಿ 55 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಆಪೈಕಿ 28ಕಾಮಗಾರಿಗಳು ಪೂರ್ಣಗೊಂಡಿವೆ. 25ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಉಳಿದಂತೆ 2ಕಾಮಗಾರಿಗಳು ಯೋಜನಾ ಹಂತದಲ್ಲಿವೆ ಎಂದರು.
ಕಳೆದ 2ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಕಾರ್ಮಿಕರ ಹಾಗೂ ಮೂಲಸಾಮಗ್ರಿಗಳ ಕೊರತೆಯಿಂದ ಪ್ರಗತಿ ಕುಂಠಿತವಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರವೂ ಯೋಜನೆಯ ಕಾಲಮಿತಿಯನ್ನು 2023ರ ಡಿಸೆಂಬರ್ ಮಾಹೆಯವರೆಗೆ ವಿಸ್ತರಿಸಿದೆ. ಆದಾಗ್ಯೂ 2022ರ ಡಿಸೆಂಬರ್ ಮಾಹೆಯ ಅಂತ್ಯದೊಳಗಾಗಿ ಶೇ.95ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ, ಜ್ಞಾನೇಶ್ವರ್, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಇಂಜಿಯರುಗಳು ಉಪಸ್ಥಿತರಿದ್ದರು.

error: Content is protected !!