ಕಳೆದ ಸಾಲಿನಲ್ಲಿನ ಭಾರೀ ಮಳೆಯಿಂದ ಹಾನಿಗೊಳಗಾಗಿದ್ದ ನಗರದ 87ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಲು ಸರ್ಕಾರವು ಅಗತ್ಯ ಅನುದಾನ ಮಂಜೂರು ಮಾಡಿದ್ದು, ತ್ವರಿತಗತಿಯಲ್ಲಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಹಾನಗರಪಾಲಿಕೆ ಅಭಿಯಂತರರಿಗೆ ಸೂಚಿಸಿದರು.
ಅವರು ಇಂದು ನಗರದ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ಶಾಲೆ ಹಾಗೂ ಶಾಲಾ ಶೌಚಾಲಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈವರೆಗೆ ಒಟ್ಟು 87ಶಾಲೆಗಳ ಪೈಕಿ 60ಶಾಲಾ ಕಟ್ಟಡಗಳ ದುರಸ್ತಿ ವಿವಿಧ ಹಂತದಲ್ಲಿರುವ ಬಗ್ಗೆ ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆದ ಸಚಿವರು ಉಳಿದ ಶಾಲಾ ಕಟ್ಟಡಗಳ ದುರಸ್ತಿಕಾರ್ಯ ಆರಂಭಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೈಗೊಂಡ ಕಾಮಗಾರಿಗಳು ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಕಾಮಗಾರಿ ಆರಂಭಿಸುವಲ್ಲಿ ವಿಳಂಬ ಧೋರಣೆ ತೋರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮುಂಗಾರು ಆರಂಭಗೊಳ್ಳುತ್ತಿದ್ದು, ಸೋರುವ ಶಾಲೆಗಳ ದುರಸ್ತಿಗೆ ಮೊದಲು ಗಮನಹರಿಸಬೇಕು. ಕಾಮಗಾರಿಗಳಿಗೆ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಆಯುಕ್ತರು ತಮ್ಮ ನೇತೃತ್ವದಲ್ಲಿ ಸಭೆ ಕರೆದು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಸೂಚಿಸಿದ ಅವರು, ಸಕಾಲದಲ್ಲಿ ಕಾಮಗಾರಿಗಳು ಪೂರ್ಣಗೊಂಡು ಯೋಜನೆಯ ಉದ್ದೇಶ ಸಫಲಗೊಳ್ಳಬೇಕೆಂದವರು ನುಡಿದರು.
ದಾನಿಗಳು ಶಾಲಾ ಕಟ್ಟಡಗಳ ದುರಸ್ತಿ ಮತ್ತು ಪೀಠೋಪಕರಣಗಳ ಸರಬರಾಜು ಮಾಡಲು ಆಸಕ್ತಿ ಹೊಂದಿದ್ದು, ದಾನಿಗಳ ನೆರವು ಪಡೆಯಬೇಕು. ಅದಕ್ಕಾಗಿ ಪೀಠೋಪಕರಣಗಳ ಅಗತ್ಯವಿರುವ ಶಾಲೆಗಳ ಪಟ್ಟಿಯನ್ನು ತಯಾರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ವಿಪಕ್ಷ ನಾಯಕ ಸಿ.ಯೋಗೀಶ್ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ಶಾಲಾ ದುರಸ್ತಿಗಾಗಿ ಸರ್ಕಾರವು ಭಾರೀ ಮೊತ್ತ ಬಿಡುಗಡೆಗೊಳಿಸಿದೆ. ಈ ಅನುದಾನವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಶಾಲಾ ದುರಸ್ತಿಕಾರ್ಯ ಪೂರ್ಣಗೊಂಡ ನಂತರ ಎಸ್.ಡಿ.ಎಂ.ಸಿ. ಮತ್ತು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರ ನಿರಾಕ್ಷೇಪಣ ಪತ್ರ ಪಡೆದು ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಿರೀಕ್ಷೆಯಂತೆ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಪೂರ್ಣಗೊಂಡಿದೆ. ಅದಕ್ಕಾಗಿ ಮಾರ್ಗದರ್ಶನ ನೀಡಿದ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದನಾರ್ಹರು ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಮುಂತಾದವರು ಉಪಸ್ಥಿತರಿದ್ದರು.