ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದ್ದ ತುಂಗಾನದಿಯ ನೀರನ್ನು ಸದ್ಭಳಕೆ ಮಾಡಿಕೊಂಡು ಶಿಕಾರಿಪುರ ಮತ್ತು ಹಿರೇಕೇರೂರು ತಾಲೂಕಿನ 7000ಹೆಕ್ಟೇರ್ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ, 225ಕೆರೆಗಳಿಗೆ ನೀರು ತುಂಬಿಸುವ ಹಾಗೂ ಈ ಭಾಗದಲ್ಲಿ ಬತ್ತಿಹೋಗುತ್ತಿದ್ದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ 661ಕೋಟಿ ರೂ. ವೆಚ್ಚದ ತುಂಗಾ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿಯ ನದಿ ತೀರದ ಜಾಕ್‍ವೆಲ್‍ನ ಪಾಯಿಂಟ್‍ನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಕಾಮಗಾರಿ ಅಧೀಕೃತವಾಗಿ ಆರಂಭಗೊಂಡಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ಪೂರ್ಣಗೊಳಿಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ ಅವರು, ರೈತಸ್ನೇಹಿ ಯೋಜನೆ ಪೂರ್ಣಗೊಳಿಸುವಲ್ಲಿ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಲಾಗಿದೆ ಅಲ್ಲದೇ ನಬಾರ್ಡ್‍ನಿಂದ 500ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಆರಂಭಗೊಂಡ ಈ ಕಾಮಗಾರಿಯು ಯಾವುದೇ ಕಾರಣಕ್ಕೆ ನಿಲ್ಲದಂತೆ ಮುಂದುವರೆಸುವಂತೆ ನೋಡಿಕೊಳ್ಳಲಾಗುವುದಲ್ಲದೇ ಅಗತ್ಯವಿರುವ ವಿದ್ಯುತ್‍ನ್ನು ಸರಬರಾಜು ಮಾಡಲು 110ಕೆ.ವಿ. ವಿದ್ಯುತ್ ಸ್ಟೇಷನ್‍ನ್ನು ಆರಂಭಿಸಿ, ವಿದ್ಯುತ್ ಒದಗಿಸುವ ಕಾಮಗಾರಿಯೂ ಜೊತೆಯಲ್ಲಿಯೇ ಸಾಗಿದೆ ಎಂದ ಅವರು, ಈ ಯೋಜನಾ ವ್ಯಾಪ್ತಿಯ ಒಟ್ಟು ಕೆರೆಗಳಲ್ಲಿ ಈಗಾಗಲೇ 75ಕೆರೆಗಳ ಹೂಳೆತ್ತುವ, ಏರಿ ದುರಸ್ತಿ, ಕಾಲುವೆ, ಗೇಟು ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಯೋಜನಾ ವೆಚ್ಚದ 100ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ತುಂಗಾನದಿಯ 250ಮೀ. ಅಗಲ ಎರಡೂ ಬದಿ ಸೇರುವವರೆಗೆ ಮೂರು ಮೀ. ಎತ್ತರದವರೆಗೆ ಬ್ಯಾರೇಜ್ ನಿರ್ಮಾಣ ಮಾಡಲಾಗುವುದು. ಈ ಯೋಜನೆಗಳಲ್ಲದೇ ಶಿವಮೊಗ್ಗ ತಾಲೂಕಿನ ಹೊಸಹಳ್ಳಿ, ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗುಣಿ ಮತ್ತು ಹೊಸೂರು, ಸೊರಬ ತಾಲೂಕಿನ ಮೂಗೂರು, ಮೂಡಿ ಮತ್ತು ಕಚವಿ ಏತನೀರಾವರಿ ಯೋಜನೆ, ಅಲ್ಲದೇ ನೆರೆಯ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಏತ ನೀರಾವರಿ ಯೋಜನೆಗಳಿಗೆ ಸುಮಾರು 2,500ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ ಮಂಜೂರು ಮಾಡಿದ್ದು, ಕಾಮಗಾರಿಗಳು ಆರಂಭಗೊಂಡಿವೆ ಎಂದವರು ನುಡಿದರು.
ಅಲ್ಲದೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಬೈಂದೂರಿನ ಸೌಕೂರು-ಸಿದ್ದಾಪುರ ಏತನೀರಾವರಿ ಯೋಜನೆ, ಬೈಂದೂರು ನಗರಕ್ಕೆ ನೀರು ಒದಗಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಶಿಕಾರಿಪುರ ತಾಲೂಕಿನ ಕಸಬಾ ಹೋಬಳಿಯ ಹಾಗೂ ಹಿರೇಕೇರೂರು ತಾಲೂಕಿನ ಸರ್ವಜ್ಞ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲಿ ಸರ್ಕಾರದಿಂದ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಅಂತೆಯೇ ಹಾನಗಲ್ ತಾಲೂಕಿನಲ್ಲಿ 350ಕೋಟಿ ವೆಚ್ಚದ ಏತನೀರಾವರಿ ಯೋಜನೆಗೂ ಚಾಲನೆ ದೊರೆಯಲಿದೆ ಎಂದರು.
ಚಟ್ನಳ್ಳಿ ಜಾಕ್‍ವೆಲ್‍ನ ನಂತರ ಹಿರೇಕೇರೂರು ತಾಲೂಕಿನ ತಡಕನಹಳ್ಳಿಯಲ್ಲಿ 175ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರದೇಶÀಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ರೇವಣಪ್ಪ, ಮುಖಂಡ ಜ್ಯೋತಿಪ್ರಕಾಶ್ ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳು, ತಂತ್ರಜ್ಞರು ಮುಂತಾದವರು ಉಪಸ್ಥಿತರಿದ್ದರು.