ಅಖಿಲ ಭಾರತೀಯ ಸುಸಂಘಟಿತ ಪಾಮ್ ಬೆಳೆ ಪ್ರಾಯೋಜನೆ (ತಾಳೆ ಬೆಳೆ), ಬಾವಿಕೆರೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಕೃಷಿ ಇಲಾಖೆ, ಆತ್ಮ ಘಟಕ, ಸಾಗರ ಹಾಗೂ ತೋಟಗಾರಿಕೆ ಇಲಾಖೆ, ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ತಾಳೆ ಬೆಳೆ ಕ್ಷೇತ್ರೋತ್ಸವವನ್ನು ಶ್ರೀ ಪ್ರಕಾಶ ನಾಯ್ಕರವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕ್ಷೇತ್ರೋತ್ಸವವನ್ನು ಡಾ. ಮೃತ್ಯುಂಜಯ ವಾಲಿ, ಸಂಶೋಧನಾ ನಿರ್ದೇಶಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ ಇವರು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಾಳೆ ಬೆಳೆಯಿಂದ ಬರುವ ಖಾದ್ಯ ತೈಲವು ಬೇರೆ ಎಣ್ಣೆ ಬೆಳೆಗಳಿಗಿಂತ ಉತ್ತಮವಾಗಿದ್ದು, ಪೋಷಕಾಂಶಗಳ ಆಗರವಾಗಿದೆಂದರು. ಅಲ್ಲದೇ, ತಾಳೆ ಬೆಳೆ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿದ್ದು, ಹೆಚ್ಚು ಬೆಳೆಯುವುದರಿಂದ ಲಕ್ಷಾಂತರ ರೂಪಾಯಿ ವಿದೇಶಿ ವಿನಿಮಯವನ್ನು ಗಳಿಸಬಹುದು ಹಾಗೂ ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದೆಂದು ತಿಳಿಸಿದರು.
ವಿಶ್ವವಿದ್ಯಾಲಯದಿಂದ ತಾಳೆ ಬೆಳೆಯ ಸಂಶೋಧನೆ ಬಗ್ಗೆಯೂ ಸಹಾ ಮಾಹಿತಿ ನೀಡಿದರು. ಮುಂದುವರೆದು, ತಾಳೆ ಬೆಳೆ ಉಪಯೋಗ ಹೃದಯ ಸಂಬಂಧಿತ ಕಾಯಿಲೆಗಳನ್ನು ಕಡಿಮೆಗೊಳಿಸುವುದರಲ್ಲಿ ಪ್ರಮುಖ ಪಾತ್ರವಿದೆಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ತಾಳೆ ಬೆಳೆಗಾರರಾದ ಶ್ರೀ ಪ್ರಕಾಶ ನಾಯ್ಕರವರು ತಾಳೆ ಬೆಳೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ. ನಾಗರಾಜಪ್ಪ ಅಡಿವಪ್ಪರ್, ಪ್ರಧಾನ ಸಂಶೋಧಕರು, ಅಖಿಲ ಭಾರತೀಯ ಸುಸಂಘಟಿತ ಪಾಮ್ ಬೆಳೆ ಪ್ರಾಯೋಜನೆ ಇವರು ವೈಜ್ಞಾನಿಕ ತಾಳೆ ಬೆಳೆಯ ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಶ್ರೀ.ಬಸವರಾಜ್, ಸಹಾಯಕ ನಿರ್ದೇಶಕರು ತೋಟಗಾರಿಕೆ (ತಾಳೆ ಬೆಳೆ), ತೋಟಗಾರಿಕೆ ಇಲಾಖೆ, ಶಿವಮೊಗ್ಗರವರು ತಾಳೆ ಬೆಳೆಗೆ ದೊರೆಯುವ ಸಹಾಯ-ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ. ಡಿ.ಎಮ್. ಬಸವರಾಜ್, ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ ತಾಳೆ ಬೆಳೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಲಾಭ ಪಡೆದು ಪರೋಕ್ಷವಾಗಿ ದೇಶದ ಆರ್ಥಿಕತೆಗೆ ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೋಯ್ಲು, ಸಾಗಾಣಿಕೆ, ಮಾರುಕಟ್ಟೆಗೆ ಡಾ. ನಾಗರಾಜಪ್ಪ ಅಡಿವಪ್ಪರ್‍ರವರು ರೈತರ ಗಮನಸೆಳೆದರು. ಶ್ರೀ. ಕಾಶಿನಾಥ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಸಾಗರ, ಶ್ರೀ ನರಸಿಂಹಮೂರ್ತಿ, ಅಧ್ಯಕ್ಷರು, ರಾಜ್ಯ ತಾಳೆ ಬೆಳೆಗಾರರ ಸಂಘ, ಶ್ರೀ ಎಮ್. ಬಸವರಾಜ, ಕೆವಿಕೆ ಶಿವಮೊಗ್ಗ, ಶ್ರೀ ವಿನಾಯಕ ರಾವ್, ಆತ್ಮ ಘಟಕ, ಸಾಗರ ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ತಾಳೆ ಬೆಳೆಗಾರರು ಭಾಗವಹಿಸಿದ್ದರು.