ತಲಕಾವೇರಿಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಶರಾವತಿ ಉಗಮ ಸ್ಥಾನ ಅಂಬುತೀರ್ಥವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತೀರ್ಥಹಳ್ಳಿ ತಾಲೂಕಿನಲ್ಲಿರುವ ಅಂಬುತೀರ್ಥವನ್ನು ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇಡೀ ನಾಡಿಗೆ ಬೆಳಕನ್ನು ನೀಡುತ್ತಿರುವ ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪಂಚಾಯತ್‍ರಾಜ್ ಇಲಾಖೆ, ಸಹ್ಯಾದ್ರಿ ಪರಂಪರೆ ಪ್ರಾಧಿಕಾರ, ತುಂಗಾ ಮೇಲ್ದಂಡೆ ನೀರಾವರಿ ಇಲಾಖೆ, ಮುಜರಾಯಿ ಇಲಾಖೆ ಸಹಯೋಗದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಪ್ರಥಮ ಹಂತದಲ್ಲಿ ಸುಮಾರು 10ರಿಂದ 15ಕೋಟಿ ರೂ. ವೆಚ್ಚದಲ್ಲಿ ಪುಷ್ಕರಣಿ ನಿರ್ಮಾಣ, ಅಂಬುತೀರ್ಥ ಕೆರೆ ಸುತ್ತಲೂ ಬದು ಗೋಡೆ, ವಾಕಿಂಗ್ ಪಾಥ್, ನದಿಯ ಉಗಮದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ನೊಣಬೂರು ವೃತ್ತದಿಂದ ಅಂಬುತೀರ್ಥ-ಅರಗಾ ರಸ್ತೆ ನಿರ್ಮಾಣ, ದೇವಾಲಯ ಬಹಳ ಪ್ರಾಚೀನವಾಗಿರುವ ಹಿನ್ನೆಲೆಯಲ್ಲಿ ಆಗಮ ಶಾಸ್ತ್ರದ ಪ್ರಕಾರ ಶಿಲಾ ದೇಗುಲ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಜೂನ್ 28ರಂದು ಚಾಲನೆ ನೀಡಲಾಗುವುದು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಶಾಸಕ ಅರಗ ಜ್ಞಾನೇಂದ್ರ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಯೋಜನೆ ಇಲ್ಲ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಸಾಗಿಸುವ ಯಾವುದೇ ಪ್ರಸ್ತಾವನೆ ಕಾರ್ಯಸಾಧುವಲ್ಲ ಮತ್ತು ಅಂತಹ ಯಾವುದೇ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿಲ್ಲ ಎಂದು ಸಚಿವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಕರೋನಾ ನಿಯಂತ್ರಣ: ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ವ್ಯವಸ್ಥಿತವಾದ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಸಾಮಾಜಿಕ ಅಂತರವನ್ನು ಕಾಪಾಡದೆ, ಮಾಸ್ಕ್ ಸರಿಯಾಗಿ ಧರಿಸದೆ, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಬೇಜವಾಬ್ದಾರಿ ತೋರಿದರೆ ಮಾತ್ರ ಕರೋನಾ ಹರಡಲು ಸಾಧ್ಯ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಮೇಯರ್ ಸುವರ್ಣಾ ಶಂಕರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಉಪಸ್ಥಿತರಿದ್ದರು.

error: Content is protected !!