ಶಿವಮೊಗ್ಗ ಜುಲೈ 30: 2022-23ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ “ರೈತಶಕ್ತಿ” ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250/- ರೂ.ನಂತೆ ಗರಿಷ್ಟ 5 ಎಕರೆಯವರೆಗೆ 1250/- ರೂ.ಗಳನ್ನು ಡಿಬಿಟಿ ಮೂಲಕ ಡೀಸೆಲ್ ಸಬ್ಸಿಡಿ ನೀಡುವ “ರೈತಶಕ್ತಿ” ಯೋಜನೆ ಇದಾಗಿದೆ.
ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಟ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್‍ನಲ್ಲ್ಲಿ(FRUITS)ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನ ವರ್ಗಾವಣೆಯಾಗಲಿದೆ. ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನೆ ಪಡೆಯಲು ಹತ್ತಿರದ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್‍ಗಳ ವಿಸ್ತೀರ್ಣವನ್ನು ಫ್ರೂಟ್ಸ್ ಪೋರ್ಟಲ್‍ನಲ್ಲಿ ಆಗಸ್ಟ್ 20 ರೊಳಗೆ ನೋಂದಣಿ ಮಾಡಿಸಬೇಕು. ಈ ದಿನಾಂಕದವರೆಗೆ ಫ್ರೂಟ್ಸ್ ಪೋರ್ಟಲ್‍ನಲ್ಲಿ ನೋಂದಾವಣಿಯಾದ ವಿಸ್ತೀರ್ಣಕ್ಕನುಗುಣವಾಗಿ ಡೀಸೆಲ್ ಸಬ್ಸಿಡಿ ಡಿಬಿಟಿ ಮುಖಾಂತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ದೊರೆಯಲಿದೆ. ಇದುವರೆಗೆ ಫ್ರೂಟ್ಸ್ ತಂತ್ರ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿಯನ್ನು ಮಾಡಿಸಿಕೊಳ್ಳುವುದು.
ಒಂದು ಎಕರೆವರೆಗೆ (<= 1.00ಎಕರೆ)ರೂ.250/-, ಎರಡು ಎಕರೆವರೆಗೆ (>1.00ಎಕರೆ<=2ಎಕರೆ) ರೂ.500/-, ಮೂರು ಎಕರೆವರೆಗೆ (>2.00ಎಕರೆ<=3ಎಕರೆ) ರೂ.750/-, ನಾಲ್ಕು ಎಕರೆವರೆಗೆ (>3.00ಎಕರೆ<=4ಎಕರೆ) ರೂ.1000/-, ನಾಲ್ಕು ಎಕರೆ ಮೇಲ್ಪಟ್ಟು (>4.00ಎಕರೆ ) ರೂ.1250/- ಸಹಾಯಧನ ಸಿಗಲಿದೆ.
ರೈತರು ಆಗಸ್ಟ್ 20 ರೊಳಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಮಾಲಿಕತ್ವದ ಎಲ್ಲಾ ಜಮೀನಿನ ಸರ್ವೆ ನಂಬರ್‍ವಾರು ವಿಸ್ತೀರ್ಣ ನೊಂದಣಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಅಥವಾ ನೊಂದಣಿ ಮಾಡಿಸಿಕೊಂಡು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕಿ ಜಿ.ಸಿ.ಪೂರ್ಣಿಮ ತಿಳಿಸಿದ್ದಾರೆ.