ಶಿವಮೊಗ್ಗ, ಡಿಸೆಂಬರ್ 23 : ಡಿಸೆಂಬರ್ 28ರಂದು ಸಂಜೆ 4.30ಕ್ಕೆ ಗೋಪಾಳದ ಕ್ರೀಡಾಸಂಕೀರ್ಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿರುವ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಗ್ರಾಮೀಣಾಭಿವೃಧ್ದಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಸ್ಮಾರ್ಟ್ಸಿಟಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ ಮಾತನಾಡುತ್ತಿದ್ದರು. ನಗರದ ಸೌಂದರ್ಯೀಕರಣ, ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಏಕಮುಖ ಸಂಚಾರ, ವಾಹನಗಳ ನಿಲುಗಡೆ, ಮುಂತಾದ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಸದ್ಯದಲ್ಲಿ ನಾಗರೀಕರ ಸಭೆಯನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು ನಗರದಲ್ಲಿ ಕೈಗೊಳ್ಳಲಾಗುವ ಸ್ಮಾರ್ಟ್ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 30ರಂದು ಇಂಜಿನಿಯರ್ರ ಹಾಗೂ ಗುತ್ತಿಗೆದಾರರ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು. ಅದಕ್ಕೂ ಮುನ್ನ ಡಿಸೆಂಬರ್ 24ರಂದು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಇಲಾಖಾ ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತ ಚರ್ಚೆ ನಡೆಸಲಾಗುವುದು ಎಂದರು.
8.50ಕೋಟಿ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 45ಸರ್ಕಾರಿ ಶಾಲೆಗಳ ಸ್ಮಾರ್ಟ್ ಎಜುಕೇಶನ್ ಕಾಮಗಾರಿ, 1.06ಕೋಟಿ ರೂ.ಗಳ ವೆಚ್ಚದಲ್ಲಿ ಮಾಸ್ತ್ಯಾಂಬಿಕಾ ಉದ್ಯಾನವನ, 1.55ಕೋಟಿ ರೂ. ವೆಚ್ಚದಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿ, 50.00ಲಕ್ಷ ರೂ.ವೆಚ್ಚದಲ್ಲಿ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಾಗೂ 1.0ಕೋಟಿ ಮೊತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಉಪಕರಣ ಒದಗಿಸುವುದು ಸೇರಿದಂತೆ 12.61ಕೋಟಿ ವೆಚ್ಚದ ಸ್ಮಾರ್ಟ್ಸಿಟಿ ಯೋಜನೆಯ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದರು.
3.92ಕೋಟಿ ರೂ.ವೆಚ್ಚದಲ್ಲಿ ಯೋಗಭವನ, 2.05ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಸೆಂಟರ್ ಫಾರ್ ಕಮಾಂಡ್ ಅಂಡ್ ಕಂಟ್ರೋಲ್ ಕಟ್ಟಡ ನಿರ್ಮಾಣ, 5.47ಶಿವಮೊಗ್ಗ ಖಾಸಗಿ ಬಸ್ನಿಲ್ದಾಣದ ಸೌಂದರ್ಯೀಕರಣ, 4.50ಶಿವಮೊಗ್ಗ ಸಿಮ್ಸ್ ಬೋಧನಾ ಕಾಲೇಜ್ನ 1ನೇ ಅಂತಸ್ತಿನ ಬಾಕಿ ಉಳಿದಿರುವ ಕಾಮಗಾರಿ, 72.00ಲಕ್ಷ ರೂ.ಗಳ ವೆಚ್ಚದಲ್ಲಿ ಹೊಳೆ ಬಸ್ಸ್ಟಾಪ್ ನಿಲ್ದಾಣ ಅಭಿವೃದ್ಧಿ ಕಾವiಗಾರಿ ಹಾಗೂ 2.82ಹಸಿರು ನಗರೀಕರಣ ನಿರ್ಮಾಣ ಸೇರಿದಂತೆ ಒಟ್ಟು 19.48ಕೋಟಿ ರೂ. ವೆಚ್ಚದ ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ಮಹಾನಗರಪಾಲಿಕೆ ವತಿಯಿಂದ 3.73ಕೋಟಿ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಕಸ ಸಂಗ್ರಹಣೆಗಾಗಿ ಖರೀದಿಸಲಾಗಿರುವ ಆಟೋ ಟಿಪ್ಪರ್ಸ್, 11ಕೋಟಿ ರೂ.ಗಳ ವೆಚ್ಚದಲ್ಲಿಪಾಲಿಕೆ ವ್ಯಾಪ್ತಿಯ 70ಸರ್ಕಾರಿ ಶಾಲೆಗಳ ದುರಸ್ತಿ, 4.68ಕೋಟಿ ರೂ.ಗಳ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ 20ಶೌಚಾಲಯ ಕಾಮಗಾರಿ ಹಾಗೂ 12ಲಕ್ಷ ರೂ.ಗಳ ವೆಚ್ಚದಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಅಭಿವೃದ್ಧಿಪಡಿಸಲಾಗಿರುವ ಉದ್ದಿಮೆ ಪರವಾನಿಗೆ ಮತ್ತು ಬಿ.ಬಿ.ಪಿ.ಎಸ್.ತಂತ್ರಾಂಶ ಸೇರಿದಂತೆ ಒಟ್ಟು 19.53ಕೋಟಿ ರೂ.ವೆಚ್ಚದ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಗಳು ಹಾಗೂ 105ಕೋಟಿ ವೆಚ್ಚದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿನ 137ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ಅಲ್ಲದೆ ನಗರದ ನಾಗರೀಕರ ಅಗತ್ಯಗಳಿಗೆ ಅನುಗುಣವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು ಈ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಸಹಕರಿಸುವಂತೆಯೂ ಅವರು ಮನವಿ ಮಾಡಿದರು.
ಡಿಸೆಂಬರ್ 28ರಂದು ನಡೆಯುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿರುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.