ಶಿವಮೊಗ್ಗ, ಆಗಸ್ಟ್ 20 : ರಾಜಮನೆತನದಲ್ಲಿ ಜನಿಸಿದರೂ ಸಾಮಾನ್ಯರಂತೆ ಬದುಕಿ, ಅಸಾಮಾನ್ಯರೆನಿಸಿದ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ದಿ.ದೇವರಾಜ ಅರಸು ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ದೇವರಾಜ ಅರಸು ಅವರ ದೂರದೃಷ್ಟಿ, ಕೈಗೊಂಡ ನಿರ್ಧಾರಗಳು ಸಾಮಾಜಿಕ ವ್ಯವಸ್ಥೆಯ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದವು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಕಾಗೋಡು ತಿಮ್ಮಪ್ಪನವರು ಸೇರಿದಂತೆ ಅನೇಕರು ಅರಸು ಅವರನ್ನು ಅನುಸರಿಸಿದವರಾಗಿದ್ದಾರೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಬಹುದಾದ ಅರಸು ಅವರ ಸಾಮಾಜಿಕ ಕಾಳಜಿ, ಎಲ್ಲಾ ಜಾತಿ ಜನಾಂಗಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಅವರ ಮನಸ್ಥಿತಿ, ಅವರ ಆಡಳಿತಾವಧಿಯಲ್ಲಾದ ಸುಧಾರಣೆ, ಕಂದಾಯ ಇಲಾಖೆಯಲ್ಲಿನ ಸುಧಾರಣೆಗಳು, ಬಡವರ ಉನ್ನತಿಗಾಗಿ ಅನುಷ್ಠಾನಗೊಳಿಸಿದ ಯೋಜನೆಗಳು, ಜೀತಮುಕ್ತಿ, ಉಳುವವನೆ ಹೊಲದೊಡೆಯ ಮುಂತಾದ ಯೋಜನೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದವರು ನುಡಿದರು.
ಕಾರ್ಯಕ್ರಮಕ್ಕೂ ಮುನ್ನ ಆಹ್ವಾನಿತ ಗಣ್ಯರು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೇಯರ್ ಶ್ರೀಮತಿ ಸುವರ್ಣ ಶಂಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿ.ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.