ಜೇನು ನೊಣಗಳ ಅನೇಕ ನೈಸರ್ಗಿಕ ಶತ್ರುಗಳು, ಕೀಟವಲ್ಲದ ಶತ್ರುಗಳು ಹಾಗೂ ರೋಗಗಳು ಇದ್ದೆ ಇರುತ್ತದೆ. ಇವೆಲ್ಲವುಗಳಲ್ಲಿ ಕೀಟ ಶತ್ರುಗಳು ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಕೀಟವಲ್ಲz ಶತ್ರುಗಳು ಸಾಧಾರಣ ಮತ್ತು ಆಕಸ್ಮಿಕವಾಗಿದ್ದು, ಹೆಚ್ಚಿನ ಹಾನಿ ಮಾಡುವುದಿಲ್ಲ. ಅಲ್ಲದೆ ರೋಗಳು ಬಹು ಹಾನಿಕಾರಕವಾಗಿದ್ದು, ದಕ್ಷಿಣ ಭಾರತದಲ್ಲಿ ಅಷ್ಟೊಂದಾಗಿ ಕಂಡು ಬರುತ್ತಿಲ್ಲ. ಆದ್ದರಿಂದ ಕೀಟ ಶತ್ರುಗಳು ಬಗ್ಗೆ, ಅದರಲ್ಲೂ ಮೇಣ ತಿನ್ನುವ ದೊಡ್ಡ ಹಾಗೂ ಸಣ್ಣ ಪತಂಗ ಜೇನು ಕೃಷಿಗೆ ನಿಜವಾದ ಹೆದರಿಕೆ ಇರುವುದು ಕೇವಲ ಈ ಶತ್ರುವಿನಿಂದ.
ವಿಶ್ವದಾದ್ಯಂತ ಮೇಣ ತಿನ್ನುವ ದೊಡ್ಡ ಪತಂಗ ಮತ್ತು ಮೇಣ ತಿನ್ನುವ ಸಣ್ಣ ಪತಂಗಗಳು ಜೇನು ಸಾಕಣೆಯಲ್ಲಿ ಬಹು ದೊಡ್ಡ ಸಮಸ್ಯೆಯಾಗಿವೆ. ನೈಸರ್ಗಿಕವಾಗಿ ವಾಸವಾಗಿರುವ ಸ್ಥಳದಲ್ಲಾಗಲಿ, ಅಥವಾ ನಾವು ಸಾಕಿರುವ ಪೆಟ್ಟಿಗೆಯಲ್ಲಾಗಲಿ, ಈ ಮೇಣ ಕೀಡೆಗಳಿಗೆ ತುತ್ತಾದಲ್ಲಿ ಜೇನು ನೊಣಗಳು ತಮ್ಮ ವಾಸ್ತವಿಕ ಕೆಲಸವನ್ನು ಸ್ಥಗಿತಗೊಳಿಸಿ ಎರಿಗಳಿಗೆ ಆಗುವ ಹಾನಿಯನ್ನು ತುಂಬಿಕೊಳ್ಳಲು ವಿಪರೀತ ಶ್ರಮಿಸುವುವು. ಇದರಲ್ಲಿ ಕೊನೆಗೆ ಜೇನು ನೊಣಗಳಿಗೆ ಸೋಲು ಕಟ್ಟಿಟ್ಟದ್ದು. ಹೀಗಾಗಿ ಸೋತ ಜೇನು ನೊಣಗಳು ಮೇಣದ ಎರಿಗಳನ್ನು ಅಕ್ರಮವಾಗಿ ಪ್ರವೇಶಿಸಿರುವ ಈ ಪೀಡೆಗೆ ಬಿಟ್ಟು ಬೇರೆಡೆಗೆ ಹೊರಟು ಹೋಗುವುದು ಅನಿವಾರ್ಯ. ಜೇನು ಸಾಕಾಣೆದಾರರು ಕಷ್ಟಪಟ್ಟು ಸಾಕಿದ ಜೇನು ಕುಟುಂಬಗಳನ್ನು ಈ ರೀತಿ ಕಳೆದುಕೊಂಡ ಕಹಿ ಅನುಭವ ಅನೇಕರಿಗಿದೆ. ಇತ್ತ ಮೇಣ ಪತಂಗದ ಸಂತತಿ ಇನ್ನೂ ಅಭಿವೃದ್ಧಿಗೊಂಡು ಮತ್ತೆ ಹೊಸ ಜೇನು ಗೂಡುಗಳನ್ನು ಹುಡುಕಿ ದಾಳಿಮುಂದುವರೆಸುವವು. ಹೆಜ್ಜೇನಿನ ಎರಿಗಳು ನಿಸರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವೆಡೆ, ಇದರ ಹಾವಳಿ ಉಲ್ಬಣಗೊಳ್ಳುವುದು. ಮೇಲಿಂದ ಮೇಲೆ ಸ್ಥಳಾಂತರಿಸುವ ಅಭ್ಯಾಸವಿರುವ ಹೆಜ್ಜೇನು, ಹಿಂದೆ ಬಿಟ್ಟು ಹೋಗುವ ಖಾಲಿ ಹುಟ್ಟುಗಳು ಈ ಪೀಡೆಗೆ ಇನ್ನೂ ಹೆಚ್ಚಿನ ಆಹಾರ ಒದಗಿಸುತ್ತವೆ. ಹೀಗಾಗಿ ಅತ್ಯಧಿಕ ಸಂಖ್ಯೆಯಲ್ಲಿ ವೃದ್ಧಿಗೊಂಡ ಪತಂಗಗಳು ನಮ್ಮ ಜೇನು ಕೃಷಿಯಲ್ಲಿ ಹೆಚ್ಚಿನ ತೊಡಕನ್ನು ತಂದೊಡ್ಡುವವು.
ದೊಡ್ಡ ಮೇಣದ ಪತಂಗದ ಜೇನು ಪೆಟ್ಟಿಗೆಯ ಅಡಿ ಹಲಗೆ, ಮುಚ್ಚಳದ ಬದಿ ಬಿರುಕುಗಳಲ್ಲಿ, ಜೇನು ನೊಣ ಇಲ್ಲದ ಖಾಲಿ ಎರಿಗಳಲ್ಲಿ ಜಾಗಗಳಲ್ಲಿ ಹೆಣ್ಣು ಪತಂಗವು ಸುಮಾರು 1500 ವರೆಗೆ ಗಸಗಸಿಯಂತೆ ತತ್ತಿಗಳನ್ನು ಗುಂಪಾಗಿ ಇಡುತ್ತದೆ. 8-10 ದಿನಗಳಲ್ಲಿ ತತ್ತಿಯಿಂದ ಬೆಳ್ಳನೆಯ ಮರಿಹುಳು ಹೊರಬಂದು ಮೇಣ ತಿನ್ನುತ್ತ, ರೇಷ್ಮೆ ಎಳೆಯಿಂದ ಸುತ್ತುವರೆಯಲ್ಪಟ್ಟ ಸುರಂಗ ಮಾಡುತ್ತ 1 ರಿಂದ 5 ತಿಂಗಳಲ್ಲಿ ಪೂರ್ಣ ಬೆಳೆದು ಕೀಡೆಯಾಗುವುದು. ಆಗ ಮಾಸಲು ಬೂದಿ ಬಣ್ಣದಾಗಿದ್ದು, ಸುಮಾರು 30 ಮಿ.ಮಿ. ಉದ್ದವಿರುವುದು. ನಂತರ ದಟ್ಟವಾದ ರೇಷ್ಮೆಯ ಗೂಡಿನಲ್ಲಿ ಕೋಶಾವಸ್ಥೆ ಹೊಂದಿ, 1-8 ವಾರಗಳಲ್ಲಿ ಪತಂಗವು ಹೊರ ಬಂದು ಸಾಧಾರಣ 2 ವಾರಗಳವರೆಗೆ ತತ್ತಿ ಇಡುವುದು. ಈ ಮೇಣ ಕೀಡೆಯ ನಿವಾರಣೆ ಮತ್ತು ಹತೋಟಿ ಕ್ರಮಗಳ ಬಗ್ಗೆ ಬಹುಕಾಲದಿಂದಲೂ ಶಿಫಾರಸ್ಸು ಮಾಡಿರುವ ಹಲವು ಸಾಮಾನ್ಯ ವಿಧಾನಗಳನ್ನು ಸಂಕ್ಷೀಪ್ತವಾಗಿ ಇಲ್ಲಿ ಸೂಚಿಸಲಾಗಿದೆ.
- ಬಲಿಷ್ಟ ಜೇನು ಗೂಡುಗಳಿಗೆ ಈ ಪೀಡೆಯ ಹಾವಳಿ ಪಡೆದುಕೊಳ್ಳುವ ಸಾಮಥ್ರ್ಯವಿದೆಯಾದರೂ ಪ್ರತಿ 15 ದಿನಗಳಿಗೊಮ್ಮೆ ಪೀಡೆಯ ಇರುವಿಕೆ ಬಗ್ಗೆ ಪರೀಕ್ಷಿಸುತ್ತಿರಬೇಕು. ಹಾಗೂ ಅಡಿಮಣಿಯನ್ನು ಕೆರೆದು ಪೂರ್ಣ ಸ್ವಚ್ಛಗೊಳಿಸಬೇಕು. ಪೆಟ್ಟಿಗೆಯ ಹೊರ ಮೈಮೇಲೆ ಗಸಗಸೆ ಕಾಳಿನಷ್ಟು ಸಣ್ಣಗಿರುವ ಗುಂಪಾದ ತತ್ತಿ ಕಂಡುಬಂದರೆ ಕೆರೆದು ತೆಗೆಯಬೇಕು.
- ಜೇನು ಪೆಟ್ಟಿಗೆಯ ಸಂದು ಬಿರುಕುಗಳನ್ನು ರೋಸಿನ್ ಮತ್ತು ಕೆನೆಗಾರಗಳ ಮಿಶ್ರಣದಿಂದ ಅಥವಾ ಜಿಗಟು ಮಣ್ಣಿನಿಂದ ಮುಚ್ಚುವುದರಿಂದ ಪೀಡೆಯ ಪತಂಗಗಳು ತತ್ತಿ ಇಡಲು ಅವಕಾಶ ಕಡಿಮೆಯಾಗುವುದು.
- ಪರಿಸರದಲ್ಲಿ ಬಾಧೆ ಹೆಚ್ಚುತ್ತಿರುವುದು ಕಂಡುಬಂದಲ್ಲಿ ಜೇನು ಅಡ್ಡಾಡುವ ದಾರಿಯನ್ನು ಸಣ್ಣದನ್ನಾಗಿ ಮಾಡಿ, ಜೇನುಗಳಿಗೆ ಮೇಣ ಪತಂಗ ಬಾರದಂತೆ ಪ್ರವೇಶದ್ವಾರ ಕಾಯಲು ಸುಲಭಗೊಳಿಸಬೇಕು.
- ಅಭಾವ ಕಾಲದಲ್ಲಿ ಗೂಡಿನಲ್ಲಿ ನೊಣಗಳಿಂದ ಪೂರ್ಣ ತುಂಬುವಷ್ಟು ಎರಿಗಳನ್ನಿಡಬೇಕು. ನೊಣಗಳಿಲ್ಲದೆ ಖಾಲಿ ಇರುವ ಎರಿಗಳಿದ್ದರೆ ತೆಗೆದು ಸಂಗ್ರಹಿಸಿಡಬೇಕು.
- ಬಾಧೆಗೊಳಗಾದ ಎರಿಗಳಿಗೆ, ಅಂದರೆ ಕೇವಲ ಮೇಣಚಿಟ್ಟೆ ಅಥವಾ ಅವುಗಳ ಮರಿಹುಳುಗಳಿದ್ದರೆ, ಧೂಪ ಹಾಕಬೇಕು. ಇದು ಸಾಧ್ಯವಾಗದಿದ್ದಲ್ಲಿ ಬಾಧೆಗೆ ತುತ್ತಾದ ಖಾಲಿ ಎರಿಗಳನ್ನು ಸುಟ್ಟುಹಾಕಬೇಕು.
- ಜೇನು ಸಾಕಾಣಿಕೆಯ ಸುತ್ತುಮುತ್ತಲಿನ ಪ್ರದೇಶದಲ್ಲಿ ಹಳೆಯ ಜೇನು ಗೂಡಿನ ಖಾಲಿ ಹುಟ್ಟುಗಳು ಇದ್ದರೆ ಅವುಗಳನ್ನು ಸುಟ್ಟು ಹಾಕಬೇಕು.
- ಸುಣ್ಣ-ಗಂಧಕ ಔಷಧಿ ಮಿಶ್ರಣ ತಯಾರಿಸಿ, ಜೇನು ಪೆಟ್ಟಿಗೆಯ ಬಿರುಕು ಮತ್ತು ಸಂದುಗಳಿರುವೆಡೆ ಹೊರ ಮೈಗೆ ಲೇಪಿಸಬೇಕು. ಅದರಲ್ಲಿಯೂ ಮುಖ್ಯವಾಗಿ, ಪೆಟ್ಟಿಗೆಯ ಹೊರಮೈಯಲ್ಲಿ ಕಾಣುವ ಎಲ್ಲ ಬಿರುಕು ಸಂದುಗಳಿಗೆ ಲೇಪಿಸಬೇಕು.
ಈ ಔಷಧಿಯ ಬಳಕೆಯಿಂದ ಜೇನು ನೊಣಗಳಿಗೆ ಯಾವ ಬಾಧಕವೂ ಇಲ್ಲ. ಆದರೆ ಮೇಣ ಪತಂಗಗು ಹೊಸದಾಗಿ ಬಂದು ತತ್ತಿ ಇಡುವುದನ್ನು ಔಷಧಿಯ ವಿಕರ್ಷಕ ಗುಣದಿಂದಾಗಿ ತಪ್ಪಿಸಬಹುದು. ಇದರ ಹಾವಳಿಯು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚುವುದರಿಂದ ಜೂನ್-ತಿಂಗಳ ಪ್ರಾರಂಭದಲ್ಲಿ ಜೇನು ಪೆಟ್ಟಿಗೆಗಳಿಗೆ ಔಷಧಿ ಲೇಪಿಸಬೇಕು. ಎರಡುವರೆ ಲೀಟರ್ ನೀರಿನಲ್ಲಿ, 250 ಗ್ರಾಂ ಸುಣ್ಣ ಹಾಕಿ ಪೂರ್ಣ ಅರಳಿದ ಮೇಲೆ ಜರಡೆಯಲ್ಲಿ ಸುಣ್ಣದ ನೀರನ್ನು ಸೋಸಬೇಕು. ಆ ದ್ರಾವಣವನ್ನು ಸ್ಟೀಲ್ ಅಥವಾ ತಗಡಿನ ಪಾತ್ರೆಯಲ್ಲಿ ಕುದಿಸುತ್ತಾ, 500 ಗ್ರಾಂ ಕರಗುವ ನೀರಿನಲ್ಲಿ ಗಂಧಕದ ಪುಡಿ ಹಾಕಿರಿ. ಒಟ್ಟು ದ್ರಾವಣ ಮಂದವಾಗುವವರೆಗೆ ಕುದಿಸುವುದನ್ನು ಮುಂದುವರೆಸಬೇಕು. ಸುಣ್ಣ ಗಂಧಕ ದ್ರಾವಣ ತಯಾರಿಸುವಾಗ ತಾಮ್ರದ ಪಾತ್ರೆ ಉಪಯೋಗಿಸಬಾರದು. ಅನಂತರ ಈ ದ್ರಾವಣವನ್ನು ಲೇಪಿಸಬೇಕು. ನಿಸರ್ಗದಲ್ಲಿ ನಾನಾ ಜಾತಿಯ ಇರುವೆಗಳಿದ್ದು, ಅವು ಜೇನು ಕುಟುಂಬದ ಶತ್ರುಗಳಾಗಿವೆ. ಇವು ಮುಖ್ಯವಾಗಿ ಜೇನು ತುಪ್ಪಕ್ಕಾಗಿ ಬರುತ್ತವೆ. ಜೇನು ತುಪ್ಪದ ಜೊತೆಗೆ ಮೊಟ್ಟೆ, ಮರಿಗಳನ್ನು ತಿನ್ನುವ ಸಾಧ್ಯತೆಗಳು ಇವೆ. ಇದರಿಂದ ಜೇನು ನೊಣಗಳು ಕಷ್ಟಪಟ್ಟು ಸಂಗ್ರಹಿಸಿದ ಆಹಾರ ವ್ಯಯವಾಗುವುದು. ಇರುವೆಗಳು ಜೇನು ಪೆಟ್ಟಿಗೆಯಲ್ಲಿ ಬಾರದಂತೆ ಆಹಾರಸ್ಥಂಭದ ಅಡಿಯಲ್ಲಿ ನೀರಿನ ತೊಟ್ಟಿ ಕಟ್ಟಿ ಇರುವೆಗಳು ಮೇಲೆ ಎರದಂತೆ ಮಾಡಬೇಕು. ಅಥವಾ ಗ್ರೀಸನ್ನು ಸ್ಥಂಭದ ಮದ್ಯಭಾಗದಲ್ಲಿ ಲೇಪಿಸಬೇಕು. ಮತ್ತು ಇರುವೆ ಗೂಡುಗಳನ್ನು ಪತ್ತೆ ಹಚ್ಚಿ ನಾಶಪಡಿಸಬೇಕು.
ಇತರ ಶತ್ರುಗಳಾದ ಜಿರಳೆ, ಗೆದ್ದಲು, ಕಂಡು ಬಂದರೆ ಪೆಟ್ಟಿಗೆಯಿಂದ ತೆಗೆದು ಹೊರಗೊಡಿಸಬೇಕು. ಭೂಮಟ್ಟದಲ್ಲಿ ಪೆಟ್ಟಿಗೆಯನ್ನು ಇಟ್ಟ ಸ್ಟ್ಯಾಂಡ್ ಅಥವಾ ಸ್ಟೂಲ್ ಕೆಳಗೆ ಮೆಲಾಥಿಯಾನ್ ಪುಡಿ ಉದುರಿಸಿರಿ ಅಲ್ಲದೆ ನೀರು ದುಂಡಗೆ ನಿಲ್ಲುವಂತೆ ವ್ಯವಸ್ಥೆಯನ್ನು ಮಾಡಿದರೆ ಈ ವೈರಿಗಳಿಂದ ರಕ್ಷಿಸಬಹುದು.
ಜಹೀರ್ ಅಹಮದ್ ಬಿ. ವಿಜ್ಞಾನಿಗಳು. ಕೃಷಿ ವಿಜ್ಞಾನ ಕೇಂದ್ರ