ಶಿವಮೊಗ್ಗ, ಜೂನ್ 04 : ಶಿವಮೊಗ್ಗ ರಂಗಾಯಣ ರೆಪರ್ಟರಿಯು ಜೂನ್ 07ರಿಂದ ಪ್ರಸಕ್ತ ಸಾಲಿನ ರಂಗಾಯಣದ ರಂಗತೇರು ಎಂಬ ಮೊದಲ ಹಂತದ ವಿಶಿಷ್ಥ ರಂಗಪಯಣವನ್ನು ಆರಂಭಿಸಲಿದೆ ಎಂದು ಶಿವಮೊಗ್ಗ ರಂಗಾಯಣ ಘಟಕದ ಅಧ್ಯಕ್ಷ ಡಾ|| ಎಂ.ಗಣೇಶ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ ಮಾತನಾಡುತ್ತಿದ್ದರು. ಈ ರಂಗಪಯಣವು ಮಲೆನಾಡು, ಅರೆಮಲೆನಾಡು, ಉತ್ತರ ಕರ್ನಾಟಕದ ಬಯಲು ಸೀಮೆ ಮತ್ತು ಹೈದರಬಾದ್ ಕರ್ನಾಟಕದ ಊರುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 7,000ಕಿ.ಮೀ. ದೂರ ಸಂಚರಿಸಲಿದೆ ಎಂದವರು ನುಡಿದರು.

ಈ ವರ್ಷ ಶಿವಮೊಗ್ಗ ರಂಗಾಯಣದ ರೆಪರ್ಟರಿಗೆ ಪ್ರೊ.ಅರವಿಂದ ಮಾಲಗತ್ತಿಯವರ ದಲಿತ ಆತ್ಮಕಥನ ಆಧಾರಿತ ಡಾ.ಎಂ.ಗಣೇಶ ನಿರ್ದೇಶನದ “ಗೌರ್ಮೆಂಟ್ ಬ್ರಾಹ್ಮಣ”, ಮಣಿಪುರದ ಯುವ ನಿರ್ದೇಶಕ ಜಾಯ್ ಮೈಸ್ನಾಂರವರು ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ರಚಿಸಿ ನಿರ್ದೇಶಿಸಿದ ‘ಇದಕ್ಕೆ ಕೊನೆ ಎಂದು..?’ ಹಾಗೂ ಹಿರಿಯ ನಿರ್ದೇಶಕರಾದ ಪಿ.ಗಂಗಾಧರ ಸ್ವಾಮಿ ಅವರು ಬಾದಲ್ ಸರ್ಕಾರ್‍ರವರ ಮಿಚಿಲ್ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿರುವ “ಮೆರವಣಿಗೆ” ಎಂಬ ಮೂರು ನಾಟಕಗಳಲ್ಲದೇ ಕಳೆದ ವರ್ಷದ ರಂಗಪಯಣದಲ್ಲಿ ಪ್ರದರ್ಶಿಸಿದ್ದ ಸವಿತರಾಣಿ ನಿರ್ದೇಶನದ “ಟ್ರಾನ್ಸ್ನೇಷನ್” ನಾಟಕವನ್ನು ಸಹ ಜೊತೆ ಮಾಡಿಕೊಂಡು ಒಟ್ಟು ನಾಲ್ಕು ನಾಟಕಗಳನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗಿದೆ ಎಂದವರು ನುಡಿದರು.

ಜೂನ್ ಏಳರಿಂದ ಪ್ರಾರಂಭವಾಗುವ ರಂಗಾಯಣದ ರಂಗತೇರು ಸತತವಾಗಿ ನಾಲ್ಕು ತಿಂಗಳುಗಳ ಕಾಲ ಕರ್ನಾಟಕದ ಹಲವು ಊರುಗಳಲ್ಲಿ ಸಂಚರಿಸಲಿದೆ. ಎರಡನೇ ಹಂತವು ಆಗಸ್ಟ್ ತಿಂಗಳಿನಲ್ಲಿ ಶಿವಮೊಗ್ಗ ರಂಗಾಯಣದಲ್ಲಿ ಪ್ರತಿ ಶನಿವಾರ, ಭಾನುವಾರಗಳಂದು ವಾರಾಂತ್ಯ ನಾಟಕ ಪ್ರದರ್ಶನಗಳನ್ನು ನೀಡಿ ವಾರದ ಉಳಿದ ದಿನಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲಿ ಪ್ರದರ್ಶನಗಳನ್ನು ನೀಡಲಿದೆ. ಮೂರನೇ ಹಂತದ ರಂಗಪಯಣವು ಕರಾವಳಿ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆÀಗಳಲ್ಲಿ ಸಂಚರಿಸುತ್ತದೆ. ರಂಗಾಯಣ ರೆಪರ್ಟರಿಯ 18 ಜನ ಕಲಾವಿದ,ತಂತ್ರಜ್ಞರು ಮತ್ತು ಒಬ್ಬರು ರಂಗಪಯಣವನ್ನು ನೋಡಿಕೊಳ್ಳುವ ಸಂಚಾಲಕರು ಇರಲಿದ್ದಾರೆ ಎಂದವರು ನುಡಿದರು.
ಶಿವಮೊಗ್ಗ ರಂಗಾಯಣ ರೆಪರ್ಟರಿಯು ಕಳೆದ ವರ್ಷ ರಂಗಾಯಣದ ರಂಗತೇರು ಎಂಬ ವಿಶಿಷ್ಥ ರಂಗಪಯಣವನ್ನು ಆರಂಭಿಸಿತು. ಈ ರಂಗಪಯಣದಲ್ಲಿ ಆಯ್ದ ಮೂರು ನಾಟಕಗಳನ್ನು ನಾಡಿನ ಹದಿನಾರು ಜಿಲ್ಲೆಗಳಲ್ಲಿ 2,661 ಕಿಲೋ ಮೀಟರುಗÀಳು ಕ್ರಮಿಸಿ ಕೆಲವು ಊರುಗಳಲ್ಲಿ ಹಲವು ದಿನಗಳ ಕಾಲ ಮೊಕ್ಕಾಂ ಮಾಡಿ 90 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಲಾಗಿತ್ತು. ಸುಮಾರು 45,000 ದಿಂದ 50,000 ಜನ ನಮ್ಮ ಪ್ರದರ್ಶನಗಳನ್ನು ವೀಕ್ಷಿಸಿದ್ದರು ಎಂಬುದು ಹರ್ಷದ ಸಂಗತಿಯಾಗಿದೆ ಎಂದರು.
ಈ ರಂಗಾಯಣದ ರಂಗಪಯಣ ಉದ್ಘಾಟನಾ ಕಾರ್ಯಕ್ರಮವು ಜೂನ್ 07ರಂದು ಬೆಳಿಗ್ಗೆ 8.30ಕ್ಕೆ ರಂಗಾಯಣದ ಆವರಣದಲ್ಲಿ ನಡೆಯಲಿದ್ದು, ರಂಗ ವಿಮರ್ಶಕ, ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಜಾನಕಿರವರು ಅಧ್ಯಕ್ಷತೆ ವಹಿಸುವರು ಹಾಗೂ ರಂಗತೇರಿನ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿರುವರು. ಕಲಾವಿದರು ರಂಗತಂಡಗಳ ಒಕ್ಕೂಟದ ಕೋಶಾಧ್ಯಕ್ಷ ಆರ್.ಎಸ್. ಹಾಲಸ್ವಾಮಿ ಸೇರಿದಂತೆ ಜಿಲ್ಲೆಯ ಅನೇಕ ಹಿರಿಯ ರಂಗಕರ್ಮಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

error: Content is protected !!