ಕುವೆಂಪು ವಿವಿ: ವಾಣಿಜ್ಯಶಾಸ್ತ್ರ ಪಠ್ಯಕ್ರಮ ಕುರಿತು ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರ
ಶಂಕರಘಟ್ಟ, ನ. 19: ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಂಡಿರುವುದರಿಂದಪದವಿ ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನಕ್ಕೆ ಪೂರಕವಾಗುವ ಹಣಕಾಸು ನಿರ್ವಹಣೆ ಮತ್ತು ಆರ್ಥಿಕ ಶಿಕ್ಷಣ ಕುರಿತ ಜೀವನ ಕೌಶಲ್ಯದ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವುದರತ್ತ ವಾಣ ಜ್ಯಶಾಸ್ತ್ರದ ಅಧ್ಯಾಪಕರು ಕಾರ್ಯೋನ್ಮುಖರಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಕರೆಕೊಟ್ಟರು.
ಕುವೆಂಪು ವಿಶ್ವವಿದ್ಯಾಲಯದ ವಾಣ ಜ್ಯಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ, ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕುರಿತ ಪಠ್ಯಕ್ರಮ ವಿಷಯದ ಬಗ್ಗೆ ವಿಶ್ವವಿದ್ಯಾಲಯದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಸೋಮವಾರದಿಂದ ಆರಂಭವಾದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಶಿಕ್ಷಣ ಮತ್ತು ಹಣಕಾಸು ನಿರ್ವಹಣೆ ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು, ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲರಿಗೂ ಅತ್ಯವಶ್ಯಕವಾದುದು. ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಹಣಕಾಸು ನೀತಿ ಮತ್ತು ಮಾರುಕಟ್ಟೆ ಆಧಾರಿತ ಏರಿಳಿತಗಳು ತೀವ್ರತರದ ಪರಿಣಾಮ ಬೀರುತ್ತದೆ. ಇದು ವಿವಿಧ ಉದ್ಯೋಗಗಳಲ್ಲಿ ತೊಡಗಿರುವ ವೃತ್ತಿಪರರ ಆದಾಯವನ್ನು ಪ್ರಭಾವಿಸುವುದರ ಜೊತೆಗೆ ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಸ್ತು ಕಲಿಸುವ ಜವಾಬ್ದಾರಿಯುತ ಕಾರ್ಯವಾಗಬೇಕಿದೆ ಎಂದರು.
ವಾಣ ಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ವೆಂಕಟೇಶ್ ಮಾತನಾಡಿ, ನೂತನ ಶಿಕ್ಷಣ ನೀತಿಯು ಜೀವನ ಕೌಶಲ್ಯ ಕಲಿಸುವ ಹೊಸ ರೀತಿಯ ಕೋರ್ಸ್ ಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ. ಅದರಲ್ಲಿಯೂ ವಾಣ ಜ್ಯಶಾಸ್ತ್ರ ಕೋರ್ಸ್ ಗೆ ಅಪಾರ ಬೇಡಿಕೆಯಿದ್ದು, ಉದ್ಯೋಗಾವಕಾಶ ಒದಗಿಸುವ ಆರ್ಥಿಕ ನಿರ್ವಹಣೆ ಕುರಿತ ಕೋರ್ಸ್ಗಳನ್ನು ಅಭಿವೃದ್ಧಿಪಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನೂತನ ಶಿಕ್ಷಣ ನೀತಿ-2020 ಅಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ಸ್ನಾತಕ ಪದವಿಗಳ ಮೂರು ಮತ್ತು ನಾಲ್ಕನೇ ಸೆಮೆಸ್ಟರ್‌ನ ವಿದ್ಯಾರ್ಥಿಗಳಿಗೆ ಬೋಧಿಸುವ ವಿಷಯಗಳ ಪಠ್ಯಕ್ರಮದ ಕುರಿತು ಕಾರ್ಯಾಗಾರದಲ್ಲಿ ಅಧ್ಯಾಪಕರಿಗೆ ತರಬೇತಿ ನೀಡಲಾಯಿತು. ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿ ಪ್ರೊ. ಎಂ. ಜಯಪ್ಪ, ಎನ್‌ಎಸ್‌ಇ ಸಂಸ್ಥೆಯ ಉಪನಿರ್ವಾಹಕ ರಾಘವೇಂದ್ರ. ಎಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕುಲಸಚಿವೆ ಜಿ. ಅನುರಾಧ, ವಿವಿಯ ಎನ್‌ಇಪಿ ನೋಡಲ್ ಅಧಿಕಾರಿ ಪ್ರೊ. ಸೈಯದ್ ಅಶ್ವಕ್ ಅಹಮದ್, ವಿವಿ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದವಿ ಕಾಲೇಜುಗಳ ವಾಣಿಜ್ಯಶಾಸ್ತ್ರ ವಿಷಯದ ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.