ಶಿವಮೊಗ್ಗ : ಮಾರ್ಚ್ 16 : ಸರ್ವಸನ್ನದ್ಧವಾಗಿದ್ದು, ಜನರ ಅಗತ್ಯಗಳಿಗನುಗುಣವಾಗಿ ರೂಪಿಸಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಪೂರಕ ಅನುದಾವನ್ನು ನೀಡಿ ಸಹಕಾರ ನೀಡಿವೆ. ಹಿಂದೆಂದಿಗಿಂತ ಜಿಲ್ಲೆ ಅತ್ಯಂತ ವೇಗವಾಗಿ ಮುಂದುವರೆಯುತ್ತಿರುವುದು ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯವಾಗಿದ್ದು, ಅದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳು ಅಭಿನಂದನಾರ್ಹರು ಎಂದರು.
ಕಳೆದೆರೆಡು ವರ್ಷದಲ್ಲಿ ದೇಶದಾದ್ಯಂತ ವ್ಯಾಪಿಸಿದ್ದ ಕೊರೋನ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರವು ದಿಟ್ಟಹೆಜ್ಜೆಯನ್ನಿಟ್ಟು, ದೇಶದಲ್ಲಿಯೇ ತಯಾರಿಸಲಾದ ಉತ್ತಮ ಗುಣಮಟ್ಟದ ಲಸಿಕೆಯನ್ನು ದೇಶವಾಸಿಗಳಿಗೆ ಉಚಿತವಾಗಿ ನೀಡಲಾಗಿದೆ ಅಲ್ಲದೇ ವಿಶ್ವದ 42ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ವಿತರಿಸಿ, ಸಹಕಾರಿಯಾಗಿರುವುದು ಅತ್ಯಂತ ಸಮಾಧಾನದ ಸಂಗತಿಯಾಗಿದೆ ಎಂದರು.
ದೇಶಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಅಂಜದೇ ಸರ್ಜಿಕಲ್ ಸ್ಟ್ರೈಕ್‍ನಂತಹ ಅಚಲ ನಿರ್ಧಾರವನ್ನು ಕೈಗೊಂಡು ದೇಶದ ರಕ್ಷಣೆಗೆ ಮುಂದಾಗಿರುವುದು ಪ್ರಧಾನಮಂತ್ರಿಗಳ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದ ಅವರು, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಉತ್ತಮ ಆರೋಗ್ಯ ಯೋಜನೆಯಾಗಿದ್ದು, ರಾಜ್ಯದಲ್ಲಿ ಈ ಯೋಜನೆಯಡಿ 3.11ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ರಾಜ್ಯದ 2.32ಕೋಟಿ ಸದಸ್ಯರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅತ್ಯಲ್ಪ ಅವಧಿಯಲ್ಲಿ ಜಿಲ್ಲೆಯ 2.90ಮನೆಗಳಿಗೆ ಶುದ್ಧ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದರು.
2008ರಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರವು ರೂಪಿಸಿ ಅನುಷ್ಠಾನಗೊಳಿಸಿದ ಭಾಗ್ಯಲಕ್ಷಿ ದೂರದೃಷ್ಟಿ ಯೋಜನೆಯ ಅನುಷ್ಠಾನದಿಂದಾಗಿ ಮುಂದಿನ ವರ್ಷಕ್ಕೆ 18ತುಂಬಲಿರುವ ಬಾಂಡ್ ಪಡೆದ ಪ್ರತಿ ಹೆಣ್ಣುಮಗುವಿಗೆ ಒಂದು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ದೊರೆಯಲಿದೆ. ಜಿಲ್ಲೆಯಲ್ಲಿ ಸುಮಾರು 1.50ಲಕ್ಷ ಯುವತಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ಈ ಯೋಜನೆಯಿಂದಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 20,000ಕೋಟಿ ರೂ.ಗಳನ್ನು ವಿದ್ಯುತ್ ನಿಗಮಕ್ಕೆ ರೈತರ ಪರವಾಗಿ ಪಾವತಿಸಿದೆ. ರಸಗೊಬ್ಬರ ಸಬ್ಸಿಡಿ ನೀಡಿ, ರೈತರ ಆರ್ಥಿಕ ಹೊರೆ ಕಡಿಮೆಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ರಸ್ತೆ, ರೈಲು, ವಿಮಾನ ಸೇರಿದಂತೆ ಎಲ್ಲಾ ಸಂಚಾರಕ್ಕೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ವಿಶೇಷವಾಗಿ ರೈಲು ಸಂಪರ್ಕ ಕಲ್ಪಿಸುವಲ್ಲಿ ವಿಶೇಷ ಕ್ರಾಂತಿಯಾಗಿದೆ. ಇತ್ತೀಚಿನ ರೈಲ್ವೆ ಕ್ಷೇತ್ರದ ಕಾರ್ಯಗಳಿಂದಾಗಿ ಜಿಲ್ಲೆಯ ಜನರು ದೇಶದಾದ್ಯಂತ ಸಂಚರಿಸಲು ಅವಕಾಶ ದೊರೆತಂತಾಗಿದೆ. ಸ್ವಾತಂತ್ರ್ಯಾ ನಂತರದ ಹಲವು ದಶಕಗಳಲ್ಲಿ ಆಗದಿರುವ ರೈಲ್ವೆ ಅಭಿವೃದ್ಧಿ ಕಾರ್ಯಗಳು ಕೆಲವೇ ವರ್ಷಗಳಲ್ಲಿ ಕಾರ್ಯರೂಪಕ್ಕೆ ಬಂದಿವೆ. ವಿಶೇಷವಾಗಿ ಶಿವಮೊಗ್ಗ –ರಾಣೇಬೆನ್ನೂರು ರೈಲು ಮಾರ್ಗಕ್ಕೆ 1250ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಅನುಷ್ಠಾನ ಕಾರ್ಯ ಭರದಿಂದ ಸಾಗಿದೆ ಎಂದ ಅವರು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಅನುದಾನ ಬಿಡುಗಡೆಗೊಂಡಿದೆ ಎಂದರು.
ಅಲ್ಲದೇ ಶಿವಮೊಗ್ಗ-ಆನಂದಪುರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 669ಕೋಟಿ ಹಾಗೂ ಹೊಸೂರು, ತಾಳಗುಪ್ಪ ಸೇರಿದಂತೆ ಸಾಗರ ತಾಲೂಕಿನ ಮೂರು ಮೇಲ್ಸೇತುವೆಗಳ ನಿರ್ಮಾಣಕ್ಕೆ 200ಕೋಟಿ ರೂ.ಗಳ ಅನುದಾನ ಈಗಷ್ಟೆ ಬಿಡುಗಡೆಯಾಗಿದೆ ಎಂದರು.
ಜಿಲ್ಲೆಯ ಲಕ್ಷಾಂತರ ಸಂಖ್ಯೆಯ ಫಲಾನುಭವಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿ ಯಾವುದೇ ಅಡತಡೆಗಳಿಲ್ಲದೆ ಸೌಲಭ್ಯ ಪಡೆದಿರುವುದು ಆಡಳಿತಾರೂಢ ಸರ್ಕಾರದ ಮಹತ್ವದ ಸಾಧನೆಗಳಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೇಂದ್ರ ಪುರಸ್ಕøತ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾಮಾನ್ಯನೂ ಕೂಡ ಉತ್ಕøಷ್ಠ ದರ್ಜೆಯ ಉಚಿತ ಆರೋಗ್ಯ ಸೇವೆ ಪಡೆಯಲು ಸಾದ್ಯವಾಗಿದೆ. ದೇಶದ ಉನ್ನತಿಗೆ ಶ್ರಮಿಸುವ ರೈತರ ಕೃಷಿಗೆ ಭದ್ರತೆ ಹಾಗೂ ವಿಮಾ ಸೌಲಭ್ಯ ಒದಗಿಸಲಾಗಿರುವುದು ಕೂಡ ಜನರ ಪ್ರಶಂಸೆಗೆ ಪಾತ್ರವಾದ ಯೋಜನೆಯಾಗಿದೆ. ಜನ್‍ಧನ್ ಖಾತೆಯ ಮೂಲಕ ಶೂನ್ಯ ಠೇವಣಯ ಮೂಲಕ ಖಾತೆ ಆರಂಬಿಸಿದ ಖಾತೆದಾರರಿಗೆ ಗರಿಷ್ಟ 2ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂತರ್ಜಾತಿ ವಿವಾಹಿತರು, ಫಸಲ್‍ಬಿಮಾ, ರೈತ ವಿದ್ಯಾನಿಧಿ, ಜೀವಜಲ ಯೋಜನೆ, ಟೂರಿಸ್ಟ್ ಟ್ಯಾಕ್ಸಿ ಖರೀದಿ ಯೋಜನೆ, ನಿವೇಶನ ಹಕ್ಕುಪತ್ರ, ಗಂಗಾಕಲ್ಯಾಣ, ಉನ್ನತ ಶಿಕ್ಷಣಕ್ಕೆ ಸಹಾಯಧನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್, ಕೃಷಿಕರಿಗೆ ಯಂತ್ರೋಪಕರಣ ಟ್ರಾಕ್ಟರ್, ಟಿಲ್ಲರ್, ಅಡಿಕೆ ಕೊಯ್ಯುವ ದೋಟಿ, ಸೇರಿದಂತೆ ವಿವಿಧ ಇಲಾಖೆಗಳ ಸಹಸ್ರಾರು ಫಲಾನುಭವಿಗಳಿಗೆ ಸೌಲಭ್ಯವನ್ನು ವಿತರಿಸಲಾಯಿತು.
ಶಾಸಕ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರುದ್ರೇಗೌಡ್ರು, ಆಯನೂರು ಮಂಜುನಾಥ್, ನಾರಾಯಣಸ್ವಾಮಿ, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರಾ ರಾಮಯ್ಯ, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ತಲ್ಲೂರು ರಾಜು, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜನರ ಆಶೋತ್ತರಗಳಿಗೆ ಪೂರಕವಾಗಿ ರೂಪಿಸಿ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಲಾಗಿರುವ ಹಲವು ಯೋಜನೆಗಳ ಮಾಹಿತಿಯನ್ನೊಳಗೊಂಡ ನೂರಾರು ಸ್ಟಾಲ್‍ಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ಯೋಜನೆಗಳ ಅರಿವು ಮೂಡಿಸಲಾಯಿತು. ವಿಶೇಷವಾಗಿ, ಸ್ವಚ್ಚಭಾರತ್, ಉದ್ಯೋಗಖಾತ್ರಿ, ಸರ್ವರಿಗೂ ಸೂರು, ಕೈಗಾರಿಕೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನಾ ಇಲಾಖೆ, ರೇಷ್ಮೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ, ಗ್ರಂಥಾಲಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಉದ್ಯಮಶೀಲತಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಜನಪರ ಯೋಜನೆಗಳ ಕುರಿತು ಮಾಹಿತಿ ಕೋಶಗಳನ್ನು ನಿರ್ಮಿಸಲಾಗಿತ್ತು.

error: Content is protected !!