ಜಿಲ್ಲೆಯ ಎಲ್ಲಾ ಹೈಸ್ಕೂಲ್ ಹಾಗೂ ಕಾಲೇಜುಗಳಲ್ಲಿ ಯೋಗ ತರಗತಿಯನ್ನು ಆರಂಭಿಸುವ ಕುರಿತು ಕಾರ್ಯ ಯೋಜನೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ ಇಲಾಖೆಯ ಕಾರ್ಯಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.

ಈಗಾಗಲೇ ತಾಲೂಕು ಮಟ್ಟದಲ್ಲಿ ಆಯ್ದ ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಲಾಗಿದೆ. ಇದೇ ರೀತಿ ಪ್ರತಿ ತಾಲೂಕಿನಲ್ಲಿ ಆಯ್ದ 50ಮಂದಿ ಆಶಾ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗಿದೆ. ಆಯುಷ್ ಇಲಾಖೆ ವೈದ್ಯರು ಹಾಗೂ ತರಬೇತಿ ಪಡೆದಿರುವ ಶಿಕ್ಷಕರನ್ನು ಬಳಸಿಕೊಂಡು ಯೋಗ ತರಗತಿಗಳನ್ನು ಪ್ರಾರಂಭಿಸಬೇಕು. ಈ ಕುರಿತು ಡಿಡಿಪಿಐ ಮತ್ತು ಡಿಡಿಪಿಯು ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿ ಯೋಜನೆ ರೂಪಿಸುವಂತೆ ಸಚಿವರು ತಿಳಿಸಿದರು.

ಆಯುರ್ವೇದವನ್ನು ರೋಗ ನಿರೋಧಕ ಶಕ್ತಿ ಹೆಚ್ಚಳದ ಕ್ರಮವಾಗಿ ಬಳಸಬಹುದಾಗಿದೆ. ಪ್ರಸ್ತುತ ಕ್ವಾರೆಂಟೈನ್‍ನಲ್ಲಿರುವವರ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ಆಯುರ್ವೇದಿಕ್ ಕಷಾಯವನ್ನು ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಯೋಗ ದಿನಾಚರಣೆ: ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ಎಂಬ ಧ್ಯೇಯದಡಿಯಲ್ಲಿ ಆಚರಿಸಲಾಗುತ್ತಿದೆ. ಯೋಗ ದಿನಾಚರಣೆಯನ್ನು ಪ್ರತಿಯೊಬ್ಬರೂ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಹಾಗೂ ಕಚೇರಿಗಳಲ್ಲಿ ಸಿಬ್ಬಂದಿಗಳೊಂದಿಗೆ ಆಚರಿಸುವಂತೆ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಇಲಾಖೆ ಕಾರ್ಯಕ್ರಮ ವಿವರ: ಆಯುಷ್ ಕಚೇರಿಯ ಅಧೀನದಲ್ಲಿ ಜಿಲ್ಲೆಯ 7ತಾಲೂಕುಗಳಲ್ಲಿ 34ಚಿಕಿತ್ಸಾಲಯ, 1ಪಂಚಕರ್ಮ ಘಟಕ, 1ಯುನಾನಿ ಘಟಕ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 94ಹುದ್ದೆಗಳಿದ್ದು, 53ಹುದ್ದೆಗಳು ಖಾಲಿಯಿವೆ. ಒಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ಅವರು ಮಾಹಿತಿ ನೀಡಿದರು

ಕರೋನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 1349ಆಶಾ ಕಾರ್ಯಕರ್ತೆಯರಿಗೆ ಚ್ಯವನಪ್ರಾಶ ವಿತರಣೆ ಮಾಡಲಾಗಿದೆ. ಇದನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ, ಪೊಲೀಸ್, ನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಕೋವಿಡ್ ಫ್ರಂಟ್‍ಲೈನ್ ಕಾರ್ಯಕರ್ತರಿಗೆ ನೀಡಬಹುದಾಗಿದೆ ಎಂದರು.

error: Content is protected !!