ಶಿವಮೊಗ್ಗ, ಸೆ.13 : ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 47ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಈ ತಾಣಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಧಾರ್ಮಿಕ, ಪ್ರಾಕೃತಿಕ, ಹೆರಿಟೇಜ್ ಸೇರಿದಂತೆ 4 ಟೂರಿಸಂ ಸಕ್ರ್ಯೂಟ್ ರೂಪಿಸಲಾಗಿದೆ. ಈ ಎಲ್ಲಾ ಪ್ರವಾಸಿ ತಾಣಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆ, ವಸತಿ, ಶಾಪಿಂಗ್, ಶೌಚಾಲಯ, ಕುಡಿಯುವ ನೀರಿನಂತಹ ಮೂಲಸೌಲಭ್ಯಗಳ ಕಲ್ಪಿಸುವಿಕೆ ಸೇರಿದಂತೆ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಇದೇ ರೀತಿ ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ ಪ್ರತ್ಯೇಕ ಮಾಸ್ಟರ್ ಪ್ಲಾನ್ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಗ್ರಾಮಗಳ ಮಾಹಿತಿ ಸಂಗ್ರಹಕ್ಕೆ ಯೋಜನೆ: ಜಿಲ್ಲೆಯಲ್ಲಿರುವ ಪ್ರತಿ ಗ್ರಾಮಗಳ ಇತಿಹಾಸ, ಹೆರಿಟೇಜ್, ಆಹಾರ ಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ಐತಿಹಾಸಿಕ, ಚಾರಿತ್ರಿಕ ವ್ಯಕ್ತಿಗಳ ವಿವರ, ಕಲೆ, ಸಂಸ್ಕøತಿ, ಜೀವನ ಪದ್ಧತಿ, ಆರ್ಥಿಕ ವ್ಯವಸ್ಥೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸ್ಥಳೀಯವಾಗಿ ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿಗಳ ತಂಡಗಳನ್ನು ರೂಪಿಸಲಾಗುವುದು. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ಸಹ ನೇಮಕ ಮಾಡಲಾಗುವುದು. ಹೀಗೆ ಸಂಗ್ರಹಿಸಿದ ಮಾಹಿತಿಯ ಪರಿಶೀಲನೆ, ಬದಲಾವಣೆಗಾಗಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಈ ರೀತಿ ಸಂಗ್ರಹಿಸಿದ ಎಲ್ಲಾ ಗ್ರಾಮಗಳ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರವಾಸೋದ್ಯಮ ನೀತಿ ರಚನೆ: ಆಯಾ ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಪಶ್ಚಿಮ ಘಟ್ಟ, ಕರಾವಳಿ, ಹೆರಿಟೇಜ್ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು. ಈ ಕುರಿತಾಗಿ ಈಗಾಗಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಾಗತಿಕ ಬಂಡವಾಳ ಆಕರ್ಷಿಸಲು ಕೇರಳ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ಆ ಸಮಾವೇಶದಲ್ಲಿ ಭಾಗವಹಿಸಿ ಅದೇ ರೀತಿಯ ಸಮಾವೇಶವನ್ನು ನಮ್ಮ ರಾಜ್ಯದಲ್ಲಿ ಆಯೋಜನೆ ಮಾಡುವ ಕುರಿತು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಯಾತ್ರಿ ನಿವಾಸಗಳ ಬಗ್ಗೆ ಮಾಹಿತಿ ಸಲ್ಲಿಸಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇದುವರೆಗೆ ನಿರ್ಮಿಸಲಾಗಿರುವ ಯಾತ್ರಿ ನಿವಾಸಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿಯನ್ನು ಸಲ್ಲಿಸುವಂತೆ ಅವರು ಸಭೆಯಲ್ಲಿ ಸೂಚನೆ ನೀಡಿದರು. ಕೊಡಚಾದ್ರಿಯಲ್ಲಿ ರಸ್ತೆ ನಿರ್ಮಾಣ ಕುರಿತು ಜಂಟಿ ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ರಂಗಮಂದಿರ ನವೀಕರಣ ಪ್ರಸ್ತಾವನೆ ಸಲ್ಲಿಸಿ: ನಗರದ ಕುವೆಂಪು ರಂಗಮಂದಿರದ ನವೀಕರಣ ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದರು.
ಶಾಸಕ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಪ್ರಸನ್ನ, ಉಪ ಮೇಯರ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!