ಶಿವಮೊಗ್ಗ, ಆಗಸ್ಟ್ 13 : ವಿಶ್ವವಿಖ್ಯಾತ ಜೋಗದ ಜಲಪಾತ, ಸಾಹಸ ಕ್ರೀಡೆ, ಮನೋರಂಜನೆ, ಪ್ರೇರಣಾದಾಯಕ ಸ್ಥಳಗಳು, ಪ್ರಾಕೃತಿಕ ಹಾಗೂ ಧಾರ್ಮಿಕ ಸ್ಥಳಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಗುರುತಿಸಿ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸಲು ಉದ್ಧೇಶಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಹೇಳಿದರು.
ಅವರು ಇಂದು ಜಿಲ್ಲೆಯ ಜೋಗ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರ ಜೋಗ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಜೋಗ ಅಭಿವೃದ್ಧಿಪಡಿಸಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದರು.
ಜೋಗದ ವಾಸ್ತವ ಸ್ಥಿತಿಗತಿಗಳನ್ನು ಅರಿತು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆಯೂ ಮಾಹಿತಿ ಪಡೆದು, ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ನಂತರ ತಜ್ಞರ ಸಲಹೆ ಪಡೆದು, ಸರ್ಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಇದರಿಂದಾಗಿ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದವರು ನುಡಿದರು.
ಈಗಾಗಲೇ ರಾಜ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ 41ಮಹತ್ವದ ಸ್ಥಳಗಳನ್ನು, 319ಪ್ರಮುಖ ಪ್ರವಾಸಿ ತಾಣಗಳನ್ನು ಹಾಗೂ 1500ಕ್ಕೂ ಹೆಚ್ಚಿನ ಹೆರಿಟೇಜ್ ಮ್ಯಾನೇಜ್‍ಮೆಂಟ್ ಸೈಟ್‍ಗಳನ್ನು ಗುರುತಿಸಲಾಗಿದೆ. ಅವುಗಳ ವಾಸ್ತವ ಸ್ಥಿತಿಗತಿಗಳನ್ನು ಖುದ್ದು ವೀಕ್ಷಿಸಿ, ನಂತರ ಅವುಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕಾಗಿ ನೂತನ ಪ್ರವಾಸಿ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಅಲ್ಲದೇ ಮಲೆನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಅದನ್ನು ಹಾಗೆಯೇ ಉಳಿಸಿಕೊಂಡು, ಪರಿಸರವನ್ನು ಕಾಪಾಡಿಕೊಂಡು ಅಭಿವೃದ್ಧಿಪಡಿಸಬಹುದಾದ ಸಾಧ್ಯತೆಗಳ ಬಗ್ಗೆಯೂ ತಜ್ಞರೊಂದಿಗೆ ಚರ್ಚಿಸಲಾಗುವುದು. ವಿಶೇಷವಾಗಿ ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರವಾಸಿ ನೀತಿಯನ್ನು ರೂಪಿಸಲಾಗುವುದು ಎಂದರು.
ಪ್ರಸ್ತುತ ಸಂದರ್ಭದಲ್ಲಿ ಜೋಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ತೊಡಕುಗಳು, ಸ್ಥಗಿತಗೊಂಡಿರುವ ಧ್ವನಿ-ಬೆಳಕು ಗೀತಕಾರಂಜಿಯ ಪುನರಾರಂಭಗೊಳಿಸಲು ಉದ್ದೇಶಿಸಲಾಗಿದೆ. ಉಳಿದಂತೆ ಸಾರ್ವಜನಿಕರು ಹಾಗೂ ಸ್ಥಳೀಯರು ಕೋರಿರುವ ಕೆಲವು ವಿಷಯಗಳ ಬಗ್ಗೆಯೂ ಗಮನಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಕಾಸಕ್ಕೆ ವಿಫುಲ ಅವಕಾಶವಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಕೈಗೊಳ್ಳುವ ಕಾಮಗಾರಿಗಳು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಪ್ರಸ್ತುತ ಜೋಗದಲ್ಲಿ ರೋಪ್‍ವೇ, ವೇವ್‍ಪೂಲ್, ಕೇಬಲ್ ಕಾರ್ ಮುಂತಾದ ಸೌಲಭ್ಯಗಳನ್ನು ರೂಪಿಸಬೇಕು. ಅಲ್ಲದೇ ಮಲೇಷಿಯಾ ಹಾಗೂ ಸಿಂಗಾಪುರ ಮಾದರಿಯಲ್ಲಿ ಶರಾವತಿ ಹಿನ್ನೀರಿನ ತಾಣಗಳನ್ನು ಬಳಸಿಕೊಂಡು ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬೇಕು. ನಯಾಗರ ಜಲಪಾತವನ್ನು ಸಮೀಪದಿಂದ ವೀಕ್ಷಿಸುವಂತೆ ಜೋಗದ ಜಲಪಾತವನ್ನು ಸಮೀಪದಿಂದ ವೀಕ್ಷಿಸಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದವರು ನುಡಿದರು.
ಸಭೆಯಲ್ಲಿ ಹಾಜರಿದ್ದ ಶಾಸಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಮಾತನಾಡಿ, ಜೋಗ ಅಭಿವೃದ್ಧಿ ಪ್ರಾಧಿಕಾರದ ಸಮಿತಿಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಹೆಸರುಗಳಿದ್ದು, ಈವರೆಗೂ ಅರ್ಥಪೂರ್ಣವಾದ ಯಾವುದೇ ಸಭೆ-ಸಮಾರಂಭಗಳು ನಡೆದಿಲ್ಲ. ಆದ್ದರಿಂದ ನೂತನವಾದ ಪ್ರಾಧಿಕಾರವನ್ನು ರಚಿಸುವ ಅಗತ್ಯವಿದೆ ಎಂದ ಅವರು ನಿರೀಕ್ಷಿತ ಮಟ್ಟದ ಜೋಗದ ಅಭಿವೃದ್ಧಿ ಸಾಧ್ಯವಾಗಿಲ್ಲ. ಆದ್ದರಿಂದ ತ್ವರಿತವಾಗಿ ಮಾಡಬಹುದಾದ ಪ್ರಮುಖ ವಿಷಯಗಳ ಕಡೆಗೆ ಸಚಿವರು ಗಮನಹರಿಸಬೇಕೆಂದವರು ನುಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

error: Content is protected !!