ಶಿವಮೊಗ್ಗ, ಆ.6: ಹರ್ ಘರ್ ತಿರಂಗ್ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಎಲ್ಲಾ ಮನೆ, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಪ್ರತಿ ಮನೆ ಮನೆಯಲ್ಲೂ ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಲು ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಘೋಷವಾಕ್ಯದಡಿ ಅಭಿಯಾನಕ್ಕೆ ಕರೆ ನೀಡಿದೆ. ಇದರಂತೆ ಜಿಲ್ಲೆಯ ಪ್ರತಿ ಮನೆಗಳ, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ರಾಷ್ಟ್ರಪ್ರೇಮದ ಪ್ರದರ್ಶನದ ಸಂಕೇತವಾದ ಈ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಲು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯವಸ್ಥಿತವಾಗಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೇರಣೆ ನೀಡುವ ಕಾರ್ಯ ಮಾಡಲಾಗಿದೆ.

ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆಗಳ ಮೇಲೆ ತ್ರಿವರ್ಣ ಧ್ಜಜವನ್ನು ಹಾರಿಸಲು ಸಿದ್ಧತೆಗಳನ್ನು ಮಾಡಲಾಗಿದೆ. ಎನ್‍ಆರ್‍ಎಲ್‍ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಸ್ಥಳೀಯವಾಗಿ ಈ ಧ್ವಜಗಳನ್ನು ಸಿದ್ಧಪಡಿಸಿರುವುದು ವಿಶೇಷವಾಗಿದೆ. ಗ್ರಾಮ ಪಂಚಾಯತ್‍ಗಳಿಗೆ ಪೂರೈಕೆ ಮಾಡಲು ಶಿವಮೊಗ್ಗ ತಾಲೂಕಿನಲ್ಲಿ 16,700, ಭದ್ರಾವತಿ ತಾಲೂಕು 17500, ತೀರ್ಥಹಳ್ಳಿ 15000, ಹೊಸನಗರ 15ಸಾವಿರ, ಸಾಗರ 12ಸಾವಿರ, ಸೊರಬ 14ಸಾವಿರ ಮತ್ತು ಶಿಕಾರಿಪುರ ತಾಲೂಕಿನಲ್ಲಿ 19ಸಾವಿರ ಒಟ್ಟು 1,09,200 ಧ್ವಜಗಳನ್ನು ಸಿದ್ಧಪಡಿಸಲಾಗಿದೆ.

ಇದಲ್ಲದೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 80ಸಾವಿರ ತ್ರಿವರ್ಣ ಧ್ವಜಗಳನ್ನು ಪೂರೈಕೆ ಮಾಡಲಾಗಿದೆ. ಅಭಿಯಾನದ ಯಶಸ್ವಿಗೆ ಜಿಲ್ಲೆಯ ಎಲ್ಲಾ 11 ನಗರ ಸ್ಥಳೀಯ ಸಂಸ್ಥೆಗಳು ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿವೆ. ಜನಪ್ರತಿನಿಧಿಗಳು, ಸ್ವ ಸಹಾಯ ಸಂಘಗಳು, ವಿವಿಧ ಸಂಘ ಸಂಸ್ಥೆಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿವೆ. ತ್ರಿವರ್ಣ ಧ್ವಜಕ್ಕೆ ತಲಾ 22ರೂಪಾಯಿ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳಿಂದ ಧ್ವಜವನ್ನು ಖರೀದಿಸಿ ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ಪ್ರದರ್ಶಿಸಲು ಕೋರಲಾಗಿದೆ.

ಸಾರ್ವಜನಿಕರು ತ್ರಿವರ್ಣ ಧ್ವಜದ ಶಿಷ್ಟಾಚಾರಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಆಗಸ್ಟ್ 13ರಂದು ಹಾರಿಸಿದ ಬಾವುಟವನ್ನು ಪ್ರತಿದಿನ ಇಳಿಸುವ ಅಗತ್ಯವಿಲ್ಲ. ಹಾನಿಗೀಡಾದ ಧ್ವಜವನ್ನು ಮಾರಾಟ ಮಾಡಬಾರದು ಎಂದು ಅವರು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಯೋಜನಾ ನಿರ್ದೇಶಕ ಕರಿಭೀಮಣ್ಣ ಮೂಕಪ್ಪನವರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

error: Content is protected !!