News Next

ಜಿಲ್ಲೆಯಲ್ಲಿ ಜೂನ್25 ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ 84 ಕೇಂದ್ರಗಳಲ್ಲಿ ನಡೆಯಲಿದ್ದು, ಸುಗಮವಾಗಿ ಪರೀಕ್ಷೆಯನ್ನು ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಜಿಲ್ಲೆಯಲ್ಲಿ ಈ ಬಾರಿ 24,904 ವಿದ್ಯಾರ್ಥಿಗಳು ಹಾಗೂ 2 ಖಾಸಗಿ ಕೇಂದ್ರಗಳಲ್ಲಿ ಖಾಸಗಿಯಾಗಿ 610 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಸಾರಿಗೆ ವ್ಯವಸ್ಥೆ ಬಯಸಿದ ವಿದ್ಯಾರ್ಥಿಗಳಿಗಾಗಿ 142 ಖಾಸಗಿ ಬಸ್ ಹಾಗೂ 56 ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ದಿನಂಪ್ರತಿ ಓಡಾಡುವ ಸರ್ಕಾರಿ ಬಸ್ ಮಾರ್ಗದ ಬಸ್‍ನಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ 7ಕ್ಕೆ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಮಾಡಲಾಗಿದೆ. ತಾತ್ಕಾಲಿಕವಾಗಿ ಹಾಸ್ಟೆಲ್ ಸೌಲಭ್ಯ ಬಯಸಿದ 773 ವಿದ್ಯಾರ್ಥಿಗಳಿಗೆ 62 ಹಾಸ್ಟೆಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ 144 ನಿಷೇದಾಜ್ಞೆ ಜಾರಿಗೊಳಿಸಿದ್ದು, ಕೇಂದ್ರಗಳ ಸುತ್ತಾ ಇರುವ ಎಲ್ಲಾ ಜೆರಾಕ್ಸ್ ಮತ್ತು ಸೈಬರ್ ಸೇವಾ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊಠಡಿಯೊಳಗೆ ಬೆಳಗ್ಗೆ 8.30 ರಿಂದ ಪ್ರವೇಶಾವಕಾಶವಿದ್ದು, 10 ಗಂಟೆಯ ತನಕ ಮಕ್ಕಳು ಕೊಠಡಿಯಲ್ಲಿ ಅಭ್ಯಾಸ ಮಾಡಿಕೊಂಡು ನಂತರ ಬ್ಯಾಗನ್ನು ಕೊಠಡಿ ಹೊರಭಾಗದಲ್ಲಿ ಶೇಖರಿಸಿಡುವುದು. ವಿದ್ಯಾರ್ಥಿಗಳು ತಮ್ಮ ಬ್ಯಾಗ್‍ಗಳ ಮೇಲೆ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಹಾಕುವುದು. ಮೊಬೈಲ್ ಮತ್ತು ವಿದ್ಯುದ್ಮಾನ ಉಪಕರಣಗಳನ್ನು ನಿಷೇಧಿಸಿದೆ. ಬೇಸಿಕ್ ವಾಚ್‍ನ್ನು ತರಲು ಅವಕಾಶ ಮಾಡಿಕೊಡಲಾಗಿದೆ.
ಕೇಂದ್ರಗಳನ್ನು ಪರೀಕ್ಷೆಗೆ 2 ದಿನ ಮುನ್ನಾ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಪೋಷಕರು ಮತ್ತು ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ ಹಾಗೂ ಪ್ರತಿ ದಿನ ಪರೀಕ್ಷೆ ಮುಗಿದ ಮೇಲೆ ಪುನಃ ರಸಾಯನಿಕಗಳಿಂದ ಶುದ್ಧೀಕರೀಸಲಾಗುವುದು. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಬರುವುದು. ಖಾಸಗಿ ಶಾಲೆಗಳ ಮತ್ತು ಒಪ್ಪಂದದ ಮೇಲೆ ಮಾರ್ಗಗಳಲ್ಲಿ ಬರುವ ಸರ್ಕಾರಿ ಬಸ್‍ಗಳಿಗೆ ಈಗಾಗಲೇ ನೀಡಿರುವ ಸಮಯಕ್ಕೆ ಸರಿಯಾಗಿ ಸಿದ್ಧರಾಗಿ ಪಿಕ್‍ಅಪ್ ಪಾಯಿಂಟ್‍ಗಳಲ್ಲಿ ಇರಬೇಕು. ಬಸ್‍ನಲ್ಲಿ ಬರುವ ಮಕ್ಕಳು ಶಾಲೆಗೆ ಆಗಮಿಸಿದ ಬಸ್‍ನಲ್ಲೇ ವಾಪಾಸ್ಸು ಹೋಗುವುದು. ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡ ಖಾಸಗಿ ಅಭ್ಯರ್ಥಿಗಳಿಗೆ ಪ್ರತೀ ತಾಲೂಕು ಕೇಂದ್ರದ ಬಸ್‍ನಿಲ್ದಾಣದಿಂದ ಜಿಲ್ಲಾ ಕೇಂದ್ರದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಖಾಸಗಿ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

error: Content is protected !!