ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಕಾರಣದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿದ್ದ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಪುನಾರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಯಲ್ಲಿ ಹಕ್ಕಿಜ್ವರದ ಹೊಸ ಪ್ರಕರಣಗಳು ವರದಿಯಾಗದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೊಳೆಗೇರಿ ನಿವಾಸಿಗಳು ಸೇರಿದಂತೆ ಬಡವರಿಗೆ ಪ್ರತಿ ಕುಟುಂಬಕ್ಕೆ ಒಂದು ಲೀಟರ್ ಹಾಲು ವಿತರಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ 56 ಅಧಿಕೃತ ಕೊಳಗೇರಿಗಳಿದ್ದು, ಅಧಿಸೂಚಿತವಲ್ಲದ ಕೊಳಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಮತ್ತು ವಲಸಿಗ ಕಾರ್ಮಿಕರಿಗಾಗಿ ಸರ್ಕಾರದ ವತಿಯಿಂದ ಪ್ರಾರಂಭಿಸಲಾಗಿರುವ ತಾತ್ಕಾಲಿಕ ಪುನರ್ವಸತಿ ಶಿಬಿರಗಳ ನಿವಾಸಿಗಳ ಕುಟುಂಬಕ್ಕೆ ಸಹ ಪ್ರತಿ ದಿನ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ. ಇದಕ್ಕಾಗಿ ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.


ತರಕಾರಿ ಹಣ್ಣು ವಿತರಣೆಗೆ ಕ್ರಮ: ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟವನ್ನು ಸುಗಮವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ 43 ತಳ್ಳು ಗಾಡಿಗಳಿಗೆ ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹಾಪ್‍ಕಾಮ್ಸ್ ವತಿಯಿಂದ ಹಣ್ಣುಹಂಪಲು ಮಾರಾಟಕ್ಕೆ ಈಗಾಗಲೇ 30 ವಾಹನಗಳಿಗೆ ಅನುಮತಿ ನೀಡಲಾಗಿದ್ದು, ಇನ್ನೂ 20 ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದು. ಈ ವಾಹನಗಳಲ್ಲಿ ದರಪಟ್ಟಿ ಲಗತ್ತಿಸಲಾಗಿದ್ದು, ಸಾರ್ವಜನಿಕರು ಅದರಂತೆ ದರವನ್ನು ಪಾವತಿಸಬೇಕು ಎಂದು ಸಚಿವರು ಹೇಳಿದರು.
ನಗರದ ಎಲ್ಲಾ ವಾರ್ಡ್‍ಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಣೆ ಕಾರ್ಯವನ್ನು ನಡೆಸಲು ಸೂಚಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದ್ದು, ಪೌರಕಾರ್ಮಿಕರಿಗೆ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದೆ. ಅದೇ ರೀತಿ ಪೌರ ಕಾರ್ಮಿಕರ ಕುಟುಂಬಗಳಿಗೆ ರೇಷನ್ ಒದಗಿಸಲು ಸೂಚನೆ ನೀಡಲಾಗಿದೆ ಎಂದರು.


ಕರೋನಾ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸಲು ಎಲ್ಲರ ಸಹಕಾರ ಅಗತ್ಯವಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಗಾಳಿ ಸುದ್ದಿಗಳನ್ನು ಮತ್ತು ವದಂತಿಗಳನ್ನು ಯಾರೂ ನಂಬಬಾರದು ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಸಚಿವರು ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು.

error: Content is protected !!