ಶಿವಮೊಗ್ಗ, ಮಾರ್ಚ್-19 : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ಕಂದಾಯ ಇಲಾಖೆ ಎಂಬ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡಲಿದ್ದಾರೆ.
ಈ ಪರಿಕಲ್ಪನೆಯ ಅಂಗವಾಗಿ ಮಾರ್ಚ್ 20ರ ಶನಿವಾರ ಬೆಳಗ್ಗೆ 11.00ಕ್ಕೆ ಶಿವಮೊಗ್ಗ ತಾಲೂಕು ಹೊಳಲೂರು-1 ಹೋಬಳಿ, ಆಲದಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು, ಹಳ್ಳಿಯ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆದ್ದರಿಂದ ಆಲದಹಳ್ಳಿಯ ಗ್ರಾಮಸ್ಥರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ಮುಂಚಿತವಾಗಿ ತಮ್ಮ ಗ್ರಾಮದಲ್ಲಿಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ, ಮಾರ್ಚ್ 20 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.