ಶಿವಮೊಗ್ಗ, 17 ಜನವರಿ ಮೇಲಿನ ಹನಸವಾಡಿಯ ಮೌಲಾನಾ ಆಜಾದ್ ವಸತಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಊಟದ ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಧಾಖಲಿಸಲಾಗಿದ್ದು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯದ ಕುರಿತು ವಿಚಾರಿಸಿದ್ದು, ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ.
ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮಾತನಾಡಿ, ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ 92 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಈಗಾಗಲೇ 70 ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ತಡವಾಗಿ ದಾಖಲಾದ ವಿದ್ಯಾರ್ಥಿಗಳನ್ನು ಇನ್ನು ಸ್ವಲ್ಪ ಕಾಲ ನಿಗಾ ವಹಿಸಿ ಅವರನ್ನೂ ಸಹ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಇತರೆ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.