ಕಾಮಗಾರಿ ಮತ್ತು ದಾಖಲಾತಿ ಸಮರ್ಪಕವಾಗಿ ನಿರ್ವಹಿಸಿ : ಎಂ.ಎಲ್.ವೈಶಾಲಿ
ಶಿವಮೊಗ್ಗ, ಫೆಬ್ರವರಿ 24 : ಗ್ರಾಮೀಣ ಭಾಗದ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆ ಅನುಷ್ಟಾನದಲ್ಲಿ ಅಧಿಕಾರಿ/ಸಿಬ್ಬಂದಿಗಳು ಪ್ರತಿ ಹಂತದಲ್ಲಿ ಕಾಮಗಾರಿ ಮತ್ತು ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಸಿಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಜಲ್‍ಜೀವನ್ ಮಿಷನ್ ಯೋಜನೆಯ ಅನುಷ್ಟಾನದ ವಿವಿಧ ಹಂತದಲ್ಲಿನ ತಾಂತ್ರಿಕ ಸಿಬ್ಬಂದಿಗಳಿಗೆ ಇಂದಿನಿಂದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಯಾವುದೇ ರೀತಿಯ ಗೊಂದಲಗಳಿದ್ದರೆ ಈ ತರಬೇತಿಯಲ್ಲಿ ತಾಂತ್ರಿಕ ಸಿಬ್ಬಂದಿಗಳು ಪರಿಹರಿಸಿಕೊಳ್ಳಬೇಕು. 1 ನೇ ಹಂತದಲ್ಲಾದ ಲೋಪಗಳನ್ನು ಸರಿಪಡಿಸಿಕೊಂಡು ತಾಂತ್ರಿಕ ಸಿಬ್ಬಂದಿ ಕಾಮಗಾರಿಯನ್ನು ಮತ್ತು ಕಚೇರಿ ಸಿಬ್ಬಂದಿ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಶೇ.100 ಪಕ್ಕಾ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಬ್ಬರೂ ಸಮನ್ವಯದಿಂದ ಕೆಲಸ ಮಾಡಬೇಕು.
ಗ್ರಾ.ಪಂ ಜನಪ್ರತಿನಿಧಿಗಳು, ಅಧಿಕಾರಿಗಳು, ನೀರುಗಂಟಿ ಸೇರಿದಂತೆ ಎಲ್ಲರೊಡಗೂಡಿ ಕೆಲಸ ಮಾಡಬೇಕು. ಆಗ ಕೆಲಸದಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ಉತ್ತಮ ನಿರ್ವಹಣೆ ಸಾಧ್ಯವಾಗುತ್ತದೆ ಎಂದ ಅವರು ಎಲ್ಲ ಗ್ರಾಮಗಳಲ್ಲಿ ಒಂದೇ ತೆರನಾಗಿ ಲೋಪರಹಿತವಾಗಿ ಗುಣಮಟ್ಟದ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿಕೊಡಬೇಕು ಎಂದು ಸೂಚಿಸದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಂಗಳೂರಿನ ಅಧೀಕ್ಷಕ ಅಭಿಯಂತರ ನಾಗರಾಜ್.ಕೆ.ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮವಾಸಿಗಳ ಪ್ರತಿ ಮನೆಗಳಿಗೆ ಸಂಸ್ಕರಿಸಿದ ಶುದ್ದ ಕುಡಿಯುವ ನೀರು ಒದಗಿಸುವುದೇ ಜಲಜೀವನ್ ಮಿಷನ್‍ನ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಟಾನಗೊಳಿಸಿದ್ದು ತಡವಾದ್ದರಿಂದ 1 ನೇ ಹಂತದ ಕಾಮಗಾರಿಗಳು ಸ್ವಲ್ಪ ತರಾತುರಿಯಲ್ಲಿ ನಡೆದು ಇಂಜಿನಿಯರುಗಳಿಗೆ ಬಿಗಿ ಕಾರ್ಯಸೂಚಿ ನೀಡಲಾಯಿತು. ಹಾಗೂ ತಾಂತ್ರಿಕ ಸಿಬ್ಬಂದಿಗಳ ಕೊರತೆಯೂ ಇದ್ದರಿಂದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುವುದು ಕಷ್ಟವಾಯಿತು. ಆದರೆ ಈಗ 2ನೇ ಹಂತದ ಕಾಮಗಾರಿಯಲ್ಲಿ ಲೋಪಗಳನ್ನು ತಿದ್ದಿಕೊಂಡು ಬಹಳ ಎಚ್ಚರಿಕೆಯಿಂದ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು.
ಗ್ರಾಮ ಕ್ರಿಯಾ ಯೋಜನೆಯನ್ನು ಸಮರ್ಪಕವಾಗಿ ಸಿದ್ದಪಡಿಸಿಕೊಳ್ಳಬೇಕು. ಜನರು ಪ್ರಜ್ಞಾವಂತರಾಗಿದ್ದು ಎಚ್ಚರಿಕೆಯಿಂದ ಕೆಲಸ ಕೈಗೊಳ್ಳಬೇಕು. ಉತ್ತಮ, ನವೀನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಅಚ್ಚುಕಟ್ಟಾಗಿ, ಗುಣಮಟ್ಟದಿಂದ ನಿರ್ವಹಿಸಬೇಕು. ಎಲ್ಲ ರೀತಿಯ ಇಂಜಿನಿಯರಿಂಗ್ ಅಂಶಗಳನ್ನು ನೋಡಿಕೊಂಡು ಕೆಲಸ ಮಾಡಿದಲ್ಲಿ ಯೋಜನೆ ಯಶಸ್ವಿಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಆಡಳಿತ) ಮಲ್ಲಿಕಾರ್ಜುನ್ ಮಾತನಾಡಿ, ಹಿಂದೆಲ್ಲ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನರು ತುಂಬಾ ಕಷ್ಟಪಡಬೇಕಿತ್ತು. ಈ ಕಷ್ಟವನ್ನು ದೂರ ಮಾಡಲು ಕೇಂದ್ರ ಸರ್ಕಾರ ಪ್ರತಿ ಮನೆಗೆ ನೀರು ಒದಗಿಸಲು ಜಲಜೀವನ್ ಮಿಷನ್ ಎಂಬ ಮಹಾತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದು ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀ ನೀರು ಕೊಡುವ ಉದ್ದೇಶ ಹೊಂದಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಸುಮಾರು 25 ಲಕ್ಷ ವಸತಿಗಳಿದ್ದು ಈ ಯೋಜನೆಯಡಿ ಶೇ.47 ಸಾಧನೆ ಮಾಡಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಲ್ ಕೇಶವ್ ಮತ್ತು ಹೆಚ್.ಎಂ. ಶಿವಶಂಕರಯ್ಯ ಇವರು ಪಿಪಿಟಿ ಪ್ರದರ್ಶನದ ಮೂಲಕ ಜಲಜೀವನ್ ಮಿಷನ್ ಕುಡಿಯುವ ನೀರು ಯೋಜನೆಯ ಮುಖ್ಯಗುಣಲಕ್ಷಣಗಳು, ಉದ್ದೇಶ, ಉಪಯೋಗ, ಗುಣಮಟ್ಟ, ಗ್ರಾಮ ಕ್ರಿಯಾಯೋಜನೆ, ನಿರ್ವಹಣೆ ಹಾಗೂ ಕಾಮಗಾರಿ ವೇಳೆ ಬಳಕೆಗೆ ಬರುವ ಇಂಜಿನಿಯರಿಂಗ್ ಅಂಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಅಭಿವೃದ್ದಿ) ಜಯಲಕ್ಷ್ಮಮ್ಮ ಇತರೆ ಅಧಿಕಾರಿಗಳು ಇದ್ದರು.

error: Content is protected !!