ಶಿವಮೊಗ್ಗ: ಜನೌಷಧಿ ಕೇಂದ್ರಗಳಲ್ಲಿ ಜನೌಷಧಿ ಹೊರತುಪಡಿಸಿ ಬೇರೆ ಯಾವುದೇ ಔಷಧಿ ಮಾರಾಟ ಮಾಡುತ್ತಿದ್ದರೆ ಜಿಲ್ಲಾಡಳಿತ ಕೂಡಲೇ ಶೋಕಾಸ್ ನೋಟಿಸ್ ನೀಡಬೇಕು ಹಾಗೂ ನಿಯಮಬಾಹಿರ ಚಟುವಟಿಕೆ ಮುಂದುವರೆಸಿದಲ್ಲಿ ಜನೌಷಧಿ ಮಾರಾಟ ಅನುಮತಿ ರದ್ದುಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಎಸ್.ಚಂದ್ರಶೇಖರ್ ಒತ್ತಾಯಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಆಶಯದಿಂದ ಆರಂಭಿಸಿದ ಈ ಯೋಜನೆಯು ಭಾರತೀಯ ಜನೌಷಧಿ ಪರಿಯೋಜನೆ ಆಗಿದೆ. ಆದರೆ ಈ ಮಹತ್ತರ ಯೋಜನೆ ದಾರಿ ತಪ್ಪಿಸುವ ಕೆಲಸಗಳು ದೇಶದ ಎಲ್ಲೆಡೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನೌಷಧಿ ಕೇಂದ್ರಗಳಲ್ಲಿ ಜನೌಷಧಿ ಇಲ್ಲವೆಂದು ಹೇಳುವ ಜತೆಯಲ್ಲಿ ಪರ್ಯಾಯ ಖಾಸಗಿ ಔಷಧಿಗಳನ್ನು ನೀಡುವ ಕೆಲಸ ಆಗುತ್ತಿದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಜನೌಷಧಿ ಹೊರತುಪಡಿಸಿ ಬೇರೆ ಯಾವುದೇ ಮಾತ್ರೆ, ಔಷಧಿಗಳನ್ನು ನೀಡುವಂತಿಲ್ಲ. ಇದು ನಿಯಮಬಾಹಿರ ಎಂದು ಹೇಳಿದರು.
ಜನೌಷಧಿ ಕೇಂದ್ರಗಳಲ್ಲಿ ಬಿಲ್ ಸಹ ನೀಡಬೇಕು. ಆದರೆ ಎಲ್ಲಿಯೂ ಅಧಿಕೃತ ಬಿಲ್ ನೀಡುತ್ತಿಲ್ಲ. ಬ್ರಾಂಡೆಂಡ್ ಔಷಧಿ ಹಾಗೂ ಉತ್ಪನ್ನಗಳನ್ನು ಜನೌಷಧಿ ಕೇಂದ್ರಗಳಲ್ಲಿ ಮಾರಲಾಗುತ್ತಿದೆ. ನಿಯಮಬಾಹಿರ ಚಟುವಟಿಕೆಗಳನ್ನು ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನೌಷಧ ಕೇಂದ್ರಗಳಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಜನೌಷಧಿ ಕೇಂದ್ರಗಳಲ್ಲಿ ಆಗುತ್ತಿರುವ ಲೋಪದೋಷ ಹಾಗೂ ನೂನ್ಯತೆಗಳನ್ನು ಸರಿಪಡಿಸಬೇಕು. ಇಂತಹ ನಿಯಮ ಬಾಹಿರ ಚಟುವಟಿಕೆ ಮುಂದುವರೆದಿದ್ದಲ್ಲಿ ದೇಶದ ಆರ್ಥಿಕತೆಗೂ ಪೆಟ್ಟು ಬೀಳಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನೌಷಧಿ ಕೇಂದ್ರಗಳ ಮೇಲೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಯಾವುದೇ ಪೊಲೀಸ್ ಗಿರಿ ನಡೆಸಿಲ್ಲ. ಅಂತಹ ಪ್ರಕರಣ ಇದ್ದಲ್ಲಿ ಪೊಲೀಸರಿಗೆ ದೂರು ನೀಡಲು ಯಾವುದೇ ಅಭ್ಯಂತರವಿಲ್ಲ.
ಜನೌಷಧಿ ಕೇಂದ್ರಗಳ ಬಗ್ಗೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಯಾವುದೇ ಆಕ್ಷೇಪವಿಲ್ಲ. ಆದರೆ ಮಾರಾಟ ಪರವಾನಗಿ ಹಾಗೂ ಮಾರಾಟ ಅನುಮತಿಗೆ ಅನುಸಾರವಾಗಿ ಮಾತ್ರ ಜನೌಷಧಿಗಳನ್ನು ಮಾರಾಟ ಮಾಡಬೇಕು ಎಂಬುದು ಅನಿಸಿಕೆಯಷ್ಟೇ. ಖಾಸಗಿ ಕಂಪನಿಗಳ ಔಷಧಿ ಮಾರಾಟಕ್ಕೆ ಜನೌಷಧಿ ಕೇಂದ್ರಗಳಲ್ಲಿ ಅವಕಾಶವಿಲ್ಲ.
ಕೇಂದ್ರ ಸರ್ಕಾರದ ಜನಪರ ಯೋಜನೆ ದಾರಿ ತಪ್ಪುವಂತೆ ಆಗಬಾರದು ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳು ನಡೆಸುವವರು ಖಾಸಗಿ ಕಂಪನಿಗಳ ಔಷಧಿ ಮಾರಾಟ ಮಾಡಲು ಇಚ್ಚಿಸಿದಲ್ಲಿ ಪ್ರತ್ಯೇಕ ಮಾರಾಟ ಪರವಾನಗಿ ಪಡೆದು ಔಷಧಿ ಮಾರಾಟ ಕೇಂದ್ರ ಆರಂಭಿಸಲು ಎಲ್ಲರಿಗೂ ಅನುಮತಿ ಇದೆ. ಇದಕ್ಕೆ ಯಾರ ಅಭ್ಯಂತರವು ಇಲ್ಲ ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳ ನೂನ್ಯತೆ ಕುರಿತು ಅನೇಕ ಪತ್ರಗಳ ಮೂಲಕ ಜಿಲ್ಲಾ ಸಂಘ, ರಾಜ್ಯ ಸಂಘದ ಮೂಲಕ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಅಧೀನ ಕಾರ್ಯದರ್ಶಿಯು ಜನೌಷಧಿ ಕೇಂದ್ರಗಳಲ್ಲಿ ಜನೌಷದಿ ಮೋಹರಿಲ್ಲದ ಔಷಧಿಗಳನ್ನು ಮಾರಾಟ ಮಾಡದಂತೆ ಸ್ಪಷ್ಟನೆ ನೀಡಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಚ್.ಎಂ.ಖಯ್ಯುಮ್, ಟಿ.ಎನ್.ಚಂದ್ರಶೇಖರ್, ಕೆ.ಕುಮಾರ್, ಮಾಜಿ ಅಧ್ಯಕ್ಷ ಶಂಕರ್, ವಿವೇಕಾನಂದ ನಾಯ್ಕ, ಗಣೇಶ ಎಂ ಅಂಗಡಿ, ರವಿ ಭೂಪಾಳಂ, ವೆಂಕಟೇಶ, ಪ್ರಕಾಶ, ವಿನಾಯಕಸ್ವಾಮಿ, ಸತೀಶ್ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!