ಶಿವಮೊಗ್ಗ, ಡಿಸೆಂಬರ್ 24 : ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರವು ಕಾಲಕಾಲಕ್ಕೆ ರೂಪಿಸಿ ಅನುಷ್ಠಾನಗೊಳಿಸುವ ಜನಪರ ಕಾರ್ಯಕ್ರಮ, ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಏರ್ಪಡಿಸಿರುವ ವಸ್ತುಪ್ರದರ್ಶನ ಮತ್ತು ಮಾಹಿತಿ ಫಲಕಗಳ ಪ್ರದರ್ಶನ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಸ್ತೆ ಸಾರಿಗೆ ನಿಗಮದ ಸಹಯೋಗದೊಂದಿಗೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣದಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶನ ಮತ್ತು ಮಾಹಿತಿಫಲಕ ಹಾಗೂ ಸರ್ಕಾರವು ನೆರೆಹಾವಳಿಯಿಂದ ಹಾನಿಗೊಳಗಾದ ಸಂತ್ರಸ್ಥರ ನೆರವಿಗೆ ಧಾವಿಸಿದ ಸಂದರ್ಭದ ಅತ್ಯಪರೂಪದ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೆರೆಹಾವಳಿಯ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೊಂದ ಸಂತ್ರಸ್ಥರ, ಜಮೀನಿನಲ್ಲಿನ ಬೆಳೆ, ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಪುನರ್ ವಸತಿ ಕಲ್ಪಿಸುವಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಲ್ಲದೇ ತಕ್ಷಣದ ಪರಿಹಾರ ಕ್ರಮವಾಗಿ ಆರ್ಥಿಕ ಸಹಕಾರವನ್ನು ನೀಡಿ, ಸಂತ್ರಸ್ಥರ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ ಎಂದರು.
ಮಳೆಗಾಲದಲ್ಲಿ ಮಳೆಯಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ತೀವ್ರಪ್ರಮಾಣದ ಹಾನಿಯಾಗಿದ್ದು, ಸಹಸ್ರಾರು ಸಂಖ್ಯೆಯ ಜನ ನಿರಾಶ್ರಿತರಾಗಿದ್ದು, ಕರಳು ಹಿಂಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಸರ್ಕಾರ ಸೇರಿದಂತೆ ರಾಜ್ಯದ ಹಲವು ಸಂಘ-ಸಂಸ್ಥೆಗಳು ಹಣ, ವಸ್ತುರೂಪದ ಸಹಕಾರ ನೀಡಿ, ಮಾನವೀಯ ನೆಲೆಯಲ್ಲಿ ನಿರಾಶ್ರಿತರ ಬದುಕಿಗೆ ಆಸರೆಯಾಗಿರುವುದು ಸಮಾಧಾನ ತಂದಿದೆ ಎಂದರು.
ಅಲ್ಲದೇ ಸರ್ಕಾರವು ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಹಲವು ಕ್ಷೇತ್ರಗಳಲ್ಲಿ ಜನಹಿತಕ್ಕಾಗಿ ರೂಪಿಸಿರುವ ಯೋಜನೆಗಳ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶದ ಯಾವೊಬ್ಬ ಅರ್ಹ ಫಲಾನುಭವಿಯೂ ಈ ಯೋಜನೆಗಳಿಂದ ವಂಚಿತನಾಗದಂತೆ ಗಮನಹರಿಸಬೇಕೆಂದವರು ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತಯ್ರಣಾಧಿಕಾರಿ ನವೀನ್, ವಿಭಾಗೀಯ ಸಂಚಾರಿ ನಿಯಂತ್ರಕ ಸತೀಶ್, ಜಿಲ್ಲಾ ಜಿ.ಪಂ. ಸದಸ್ಯ ವೀರಭಧ್ರಪ್ಪ ಪೂಜಾರ, ರೈಲ್ವೇ ಸಲಹಾ ಸಮಿತಿ ಸದಸ್ಯ ಮಾಲತೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ಶಫಿ ಸಾದುದ್ದೀನ್ ಸೇರಿದಂತೆ ವಾರ್ತಾ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ.ಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.