ಶಿವಮೊಗ್ಗ, ಜನವರಿ 04 : ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 68ಮಕ್ಕಳನ್ನು ಗುರುತಿಸಲಾಗಿದ್ದು, ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ 6-14ವರ್ಷದವರೆಗಿನ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಶಿಕ್ಷಣ ಇಲಾಖೆಯು ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಅನುಸರಿಸುತ್ತಿದೆ. ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕಗಳು, ಮಧ್ಯಾಹ್ನದ ಬಿಸಿಯೂಟ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದಾಗ್ಯೂ ಅನೇಕ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿದಿರುವುದು ಬೇಸರದ ಸಂಗತಿಯಾಗಿದೆ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ ಆರ್.ಟಿ.ಇ. ನಿಯಮಗಳ ಪ್ರಕಾರ ಕಡ್ಡಾಯವಾಗಿ ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡದೆ ಸತತ ಏಳು ದಿನಗಳಿಗಿಂತ ಹೆಚ್ಚು ಕಾಲ ಗೈರು ಹಾಜರಾದ ವಿದ್ಯಾರ್ಥಿಗಳ ವಿವರಗಳನ್ನು ವಾರಕ್ಕೊಮ್ಮೆ ಸಂಗ್ರಹಿಸಿ, ನಂತರ ಮಕ್ಕಳ ಪೋಷಕರು ಮಕ್ಕಳಿಗೆ ತಿಳುವಳಿಕೆ ನೀಡಲಾಗುವುದಲ್ಲದೆ ಮತ್ತು ಸಮಾಲೋಚನೆ ನಡೆಸಲಾಗುವುದು. ನಂತರವೂ ಬಾರದ ಮಕ್ಕಳ ಪೋಷಕರಿಗೆ ನೋಟೀಸ್ ನೀಡಲಾಗುವುದು ಎಂದವರು ನುಡಿದರು.
ಜನವರಿ 06ರಿಂದ 13ರವರೆಗೆ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ವಿಶೇಷವಾಗಿ 25ತಾಂಡಾಗಳು, 67ಕೊಳಚೆ ಪ್ರದೇಶಗಳು, 12ಕಾರ್ಖಾನೆಗಳು, 11ಗಣಿಗಾರಿಕೆ ನಡೆಯುವ ಸ್ಥಳಗಳು ಸೇರಿದಂತೆ 186ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳ ಸಮೀಕ್ಷೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವ್ಯವಸ್ಥಿತ ಸಮೀಕ್ಷೆ ನಡೆಸಲು 1,520ತಂಡಗಳನ್ನು ರಚಿಸಲಾಗಿದೆ ಎಂದರು.
ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಪುನರ್ ದಾಖಲಿಸಿಕೊಳ್ಳುವುದರ ಜೊತೆಗೆ ಅಂತಹ ಮಕ್ಕಳಿಗೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತಿಂಗಳಲ್ಲಿ ಆಯ್ದ 2ತಾಲೂಕುಗಳಲ್ಲಿ ಒಂದೆಡೆ ಸೇರಿಸಿ ಸಮಾಲೋಚನೆ ನಡೆಸಿ, ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಹಕಾರ ನೆರವನ್ನು ನೀಡಲಾಗುವುದು ಎಂದವರು ನುಡಿದರು.
ಈ ಎಲ್ಲಾ ಚಟುವಟಿಕೆಗಳಲ್ಲಿ ಶಾಲಾ ಶಿಕ್ಷಕರು, ಪೋಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರುಗಳು ವಿಶೇಷ ಗಮನಹರಿಸುವಂತೆ ಹಾಗೂ ರಚಿಸುವ ತಂಡಗಳಲ್ಲಿ ಸೇರಿಸಿಕೊಳ್ಳಲಾಗುವುದು ಎಂದವರು ನುಡಿದರು.
ಈ ಮಹತ್ವದ ಕಾರ್ಯದಲ್ಲಿ ವಿವಿಧ ಇಲಾಖೆಯವರು, ಸಂಘ-ಸಂಸ್ಥೆಯವರು, ಜನಪ್ರತಿನಿಧಿಗಳು, ಪೋಷಕರು ಸಹಕಾರ ನೀಡಿ ಈ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ಜಿಲ್ಲೆಯನ್ನು ಶಾಲೆಯಿಂದ ಹೊರಗುಳಿದ ಮಕ್ಕಳ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಸಹಕಾರ ನೀಡುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹೆಚ್. ಬಿ.ಸಿ.ಎಂ.ಅಧಿಕಾರಿ ಕುಮಾರ್, ಶಿಕ್ಷಣಾಧಿಕಾರಿ ಶಂಕರಪ್ಪ, ಸಬ್ ಇನ್ಸ್‍ಫೆಕ್ಟರ್ ಹರೀಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ರೇಖಾ ಜಿ.ಎಂ., ಡಯಟ್ ಉಪನ್ಯಾಸಕ ವೀರಭದ್ರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.