ಇಂದು ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಿದ್ಧಾರೂಢ ಸಾಧಕಾಶ್ರಮದಲ್ಲಿ, ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ
ಮಹಾವಿದ್ಯಾಲಯ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.
ಜನರು ಯಾರೂ ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಎನ್.ಎಸ್.ಎಸ್. ಶಿಬಿರದ ಮೂಲಕ ಈ ಗ್ರಾಮದ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಿರುವುದು, ಕುವೆಂಪು ಶತಮಾನೋತ್ಸವ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಉತ್ತಮ ಚಿಕಿತ್ಸೆಗಾಗಿ ಬಹುದೂರ ಹೋಗಬೇಕೆಂಬ ಆತಂಕ ಇದೀಗ ದೂರವಾಗಿದ್ದು, ಎಲ್ಲವೂ ವ್ಯವಸ್ಥಿತವಾಗಿ ಚಿಕಿತ್ಸೆ ನೀಡುವ ತಜ್ಞ ವೈದ್ಯರಿರುವ ನಮ್ಮ ಸರ್ಜಿ ಆಸ್ಪತ್ರೆ ಮುಂಚೂಣಿಯಲ್ಲಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ದಿನದ 24 ಗಂಟೆಗಳಲ್ಲಿ 12 ಗಂಟೆಗಳ ಕಾಲ ಓದಿಗೆ ಸೀಮಿತವಾಗಿಸಿ, 8 ಗಂಟೆಗಳ ಕಾಲ ನಿದ್ದೆ ಮಾಡಿದರೆ, ಜೀವನ ಸುಗಮವಾಗಿ ಸಾಗುತ್ತದೆ. ವಿದ್ಯೆ ಕೆಲಸ ಮಾಡಿದರೆ, ಬುದ್ಧಿ ದೇಶ ಆಳುತ್ತದೆ. ವಿದ್ಯಾರ್ಥಿಗಳು ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಇದು ಕೇವಲ ಶಿಬಿರಗಳಿಗೆ ಸೀಮಿತವಾಗಿಸದೇ ಜೀವನದಲ್ಲೂ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ವೈದ್ಯರು, ಮತ್ತು ಗುರುಗಳಿಗೆ ಮರ್ಯಾದೆ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದು ಮುಂದಿನ ಭವಿಷ್ಯಕ್ಕೂ ಬೆಳೆಸಿಕೊಂಡು ಹೋಗಬೇಕಾಗಿದ್ದು, ಈ ಪ್ರವೃತ್ತಿ ಬೆಳೆಸಿಕೊಳ್ಳಿ. ಮೊದಲು ನಿದ್ದೆಯನ್ನು ಕೆಡಿಸುವ ಕನಸು ಕಾಣಬೇಕು. ದೊಡ್ಡ ಕನಸು ಕಾಣುವ ಜೊತೆಗೆ ಏನಾದರೂ ಸಾಧಿಸಬೇಕೆನ್ನುವ ಹುಚ್ಚುತನ ಬೆಳೆಸಿಕೊಂಡು, ದೊಡ್ಡ ವ್ಯಕ್ತಿಯಾಗುವ ದೊಡ್ಡ ಕನಸು ಕಾಣಿ. ಏನಾದರೂ ಸಾಧಿಸಲು ನಿರ್ಧರಿಸಿ, ಅದನ್ನು ನಿಮ್ಮವರಿಗೆ ತಿಳಿಸಿ ಸತತ ಪ್ರಯತ್ನ ಮಾಡಬೇಕು. ಜೊತೆಗೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು, ಪರರಿಗಲ್ಲ, ಪರಮಾತ್ಮನಿಗೆ ಎಂಬ ಧೇಯ ರೂಢಿಸಿಕೊಳ್ಳಿ ಎಂದು ತಿಳಿಸಿದರು. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಡಾ. ಅರುಣ್ ದಂತ ತಜ್ಞ ವೈದ್ಯರು ಹಲ್ಲಿನ ಶುಚಿತ್ವದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಹಲ್ಲು, ತುಟಿ, ಗಲ್ಲ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕೆಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದ ಅವರು, ಬಾಯಿ ಶುಚಿಯಿದ್ದರೆ, ಮೈ-ಮನಸ್ಸು ಶುಚಿಯಾಗಿರುತ್ತದೆ ಎಂದರು.
ಶಿಬಿರದಲ್ಲಿ 60 ಕ್ಕೂ ಹೆಚ್ಚು ಬಿ.ಎಡ್. ವಿದ್ಯಾರ್ಥಿಗಳು ಹಾಗೂ ನೂರಾರು ಗ್ರಾಮಸ್ಥರಿಗೆ ಬಿಪಿ, ಸಕ್ಕರೆ ಖಾಯಿಲೆ, ಇ.ಸಿ.ಜಿ., ದಂತ ರೋಗ ಚಿಕಿತ್ಸೆ ನಡೆಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಎಂ.ಕೆ. ಮೋಹನ್, ಉಪಾಧ್ಯಕ್ಷ ಗೋ.ವ. ಮೋಹನಕೃಷ್ಣ, ಗೊಂದಿ ಗ್ರಾಮದ ಸಮಾಜ ಸೇವಕರಾದ ದಯಾನಂದಬಾಬು, ದಂತ ತಜ್ಞ ವೈದ್ಯ ಡಾ. ಅರುಣ್, ತಜ್ಞ ವೈದ್ಯರಾದ ಡಾ. ಪ್ರಾಣೇಶ್, ಡಾ. ಸುಜಯ್, ಕುವೆಂಪು ಶತಮಾನೋತ್ಸವ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿನೀತಾ ಎನ್.ಆರ್., ಜಿಲ್ಲಾ ಒಕ್ಕಲಿಗರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾದ ಕೆ. ಸುಂದರೇಶ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಹೆಚ್.ಎಸ್. ಧರ್ಮರಾಜ್, ವಿಜಯ್ ಕುಮಾರ್, ನಾಗೇಶ್ ಸೇರಿದಂತೆ ಹಲವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಉಂಬ್ಳೆಬೈಲು ಮೋಹನ್ ವಹಿಸಿದ್ದರು.