ಇತ್ತೀಚಗೆಂತೂ ಗಿರ್ ಹಸುಗಳ ಸಾಕಣೆ ಬಹಳ ಜನಪ್ರಿಯವಾಗುತ್ತಿದೆ. ಕೆಲ ಗೋಪಾಲಕರು ಇದನ್ನು ಸಾಕಿ ಇದರ ಬೆಣ್ಣೆ ಮತ್ತು ಹಾಲನ್ನು ಅವರದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಿ ಲಾಭ ಗಳಿಸಿರುವುದು ಅನೇಕ ಕಡೆ ನೋಡಸಿಗುತ್ತದೆ. ಮಿಶ್ರತಳಿಗಳನ್ನು ಹೊರತು ಪಡಿಸಿದರೆ ಹಾಲಿನ ಇಳಿವರಿಯಲ್ಲಿ ಭಾರತೀಯ ತಳಿಗಳಲ್ಲಿ ಗಿರ್ ಪ್ರಥಮ ಸ್ಥಾನದಲ್ಲಿದೆ. ನಂತರರ ಸ್ಥಾನದಲ್ಲಿ ಸಾಹಿವಾಲ್, ಓಂಗೋಲ್ ಇತ್ಯಾದಿ ಇತರ ಭಾರತೀಯ ತಳಿಗಳ ಸರದಿ. ಕೋವಿಡ್ ಸಮಯದಲ್ಲಿ ಊರಿಗೆ ಆಗಮಿಸಿದ ಸಾಪ್ಟ್ವೇರ್ ಉಧ್ಯಮದ ಯುವ ಮಿತ್ರರದೂ ಸಹ ಈ ವಿಷಯದಲ್ಲಿಯೇ ಗೊಂದಲ. ಜಾನುವಾರು ಸಾಕಬೇಕು, ಪಶುಪಾಲನೆ ಮಾಡಬೇಕು. ಯಾವ ತಳಿ ಆರಿಸಲಿ. ಗಿರ್ ಆದರೆ ಹೇಗೆ? ಅದೆಲ್ಲಿ ಸಿಗುತ್ತದೆಯೆಂಬ ಗೊಂದಲ !. ಸರಿಯಾಗಿ ಇದರ ಬಗ್ಗೆ ತಿಳಿಯದೇ ಸಾಕಿ ಬೇಸ್ತು ಬಿದ್ದ ಅನೇಕ ಉದಾಹರಣೆ ಇವೆ.
ಇದನ್ನು ದೇಶಿ ಆಕಳು ಎಂದು ಗುರುತಿಸಿರುವದರಿಂದ ಅದರ ಬೆಲೆ ಬಹಳ ಹೆಚ್ಚಿದೆ. ಆದರೆ ಇದು ಕರ್ನಾಟಕಕ್ಕೆ “ದೇಶಿ” ತಳಿ ಆಗಲಾರದು. ಪ್ರತಿ ಭಾಗಕ್ಕೆ ಅದರದೇ ಆದ ತಳಿಗಳಿವೆ. ಮಲೆನಾಡು ಭಾಗಕ್ಕೆ ಮಲೆನಾಡು ಗಿಡ್ಡ ದೇಶಿ ತಳಿಯಾದರೆ, ಚಿಕ್ಕಮಗಳೂರು ಭಾಗಕ್ಕೆ ಅಮೃತಮಹಲ್ ದೇಶಿ ಆಗಬಲ್ಲದು. ಹಾಗೆಯೇ ಉತ್ತರ ಕರ್ನಾಟಕದ ಭಾಗದ ಧಾರವಾಡ ಇತ್ಯಾದಿ ಭಾಗಗಳಿಗೆ ಖಿಲಾರ್ ದೇಶಿ ಆದರೆ ಬೀದರಿಗೆ ದೇವಣಿ ದೇಶಿ ಆಗಬಲ್ಲದು. ಇದೊಂದು ಸಾಮಾನ್ಯ ಜ್ಞಾನ. ದೂರದ ಗುಜಾರಾತಿನಿಂದ ನಮ್ಮ ರಾಜ್ಯಕ್ಕೆ ತಂದ ತಳಿ ನಮಗೆ “ಭಾರತೀಯ ತಳಿ” ಆಗಬಲ್ಲುದೇ ಹೊರತು ದೇಶಿ ಆಗಲಿಕ್ಕಿಲ್ಲ. ಇದೆಲ್ಲ ಸಾಕುವವರಿಗೆ ಬಿಟ್ಟ ವಿಷಯ. ಇಲ್ಲಿನ ವಾತಾವರಣಕ್ಕೆ ಆಹಾರಕ್ಕೆ ಒಗ್ಗಿಕೊಳ್ಳಲು ಇವುಗಳಿಗೆ ಒಂದಿಷ್ಟು ಕಷ್ಟವೇ..
ಜುನಾಗಡ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಗಿರ್ ಆಕಳುಗಳ ಮೂತ್ರದಲ್ಲಿ ಬಂಗಾರವಿದೆ ಎಂಬ ಎಡವಟ್ಟು ತಪ್ಪು ಹೇಳಿಕೆಯಿಂದ ಅನೇಕರು ಗಿರ್ ಆಕಳುಗಳಿಗೆ ಮುಗಿಬಿದ್ದು ದಲ್ಲಾಳಿಗಳಿಂದ ಖರೀದಿಸಿ ಪಂಗನಾಮ ಹಾಕಿಸಿಕೊಂಡಿದ್ದು ಈಗ ಇತಿಹಾಸ!
ಗಿರ್ ಹಸುವಿನ ಕೆಲ ವೈಶಿಷ್ಟ್ಯಗಳು:
ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ಗೆ ವಿಶಿಷ್ಟ ಸ್ಥಾನ. ಭಾರತೀಯ ಗೋಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ ಸೌರಾಷ್ಟ್ರ ಬಳಿಯ ಗೀರ್ ಅರಣ್ಯಪ್ರದೇಶ ಇವುಗಳ ಮೂಲಸ್ಥಾನ. ಗೀರ್ ಭಾರತದ ಅತ್ಯಂತ ಪ್ರಾಚೀನ ತಳಿ, ಅಂದರೆ ಬರೊಬ್ಬರಿ 1200 ವರ್ಷಗಳಷ್ಟು ಹಳೆಯದು!
ದಿನಕ್ಕೆ 12-14 ಲೀಟರ್ ಹಾಲು ಕೊಡುವ ಸಾಮರ್ಥ್ಯ, ಅಪೂರ್ವ ರೋಗ ನಿರೋಧಕಶಕ್ತಿ, ಭಾರತೀಯ ರೈತಜೀವನಕ್ಕೆ ಪೂರಕವಾದ ಕಷ್ಟಸಹಿಷ್ಣುತೆ, ಅಚ್ಚರಿ ಹುಟ್ಟಿಸುವಂತ ಬುದ್ಧಿಶಕ್ತಿ, ಹೊಂದಿವೆ. ಕಾಡಿನಿಂದ ಬಂದ ತಳಿಯಾದರೂ ಇದರ ಸಾಮಾಜಿಕ ಸ್ವಭಾವ ಅಪೂರ್ವವಾದದ್ದು. ತನ್ನ ಒಡೆಯನ ಪ್ರೀತಿಗೆ, ಮೈನೇವರಿಕೆಗೆ, ಮುದ್ದುಗರೆಯುವಿಕೆಗೆ ಇದು ಪ್ರತಿಸ್ಪಂದಿಸುವ ವಿಧಾನ ಆನಂದ ತರುವಂತದ್ದು ಎನ್ನುತ್ತರೆ ಇದನ್ನು ಸಾಕುವ ಹೈನುಗಾರರು.
ಗಿರ್ ದೊಡ್ಡ ಗಾತ್ರದ ತಳಿ. ದನಗಳು 400-450 ಕಿಲೊಗ್ರಾಮ್ ತೂಗಿದರೆ ಹೋರಿಗಳ ತೂಕ 550 ರಿಂದ 650ಕೆ.ಜಿ. ಬಣ್ಣ ಕೆಂಪು ಮಿಶ್ರಿತ ಕಂದು. ಗೀರ್‌ನ್ನು ಬಹಳ ಸುಲಭವಾಗಿ ಗುರುತಿಸುವಂತೆ ಮಾಡುವುದು ಇದರ ಅಗಲ ಉಬ್ಬಿದ ಹಣೆ. ಗೀರ್‌ನ ಗುಣಲಕ್ಷಣ ಕೆಂಪು ಮಿಶ್ರಿತ ಕಂದು ಬಣ್ಣ, ಅಗಲ ಮುಖ, ಜೋತಾಡುವ ಕಿವಿಗಳು. ಈ ಜೋತಾಡುವ ಕಿವಿಗಳು ಕೆಳಗೆ ಒಂದನ್ನೊಂದು ತಾಕಿದರೆ ಅದನ್ನು ಪರಿಶುದ್ಧ ಗೀರ್ ತಳಿಯಾಗಿ ಗುರುತಿಸುತ್ತಾರೆ.
ಗಿರ್ ಸಾಮಾನ್ಯವಾಗಿ 21 ದಿನಕ್ಕೊಮ್ಮೆ ಬೆದೆಗೆ ಬರುತ್ತದೆ. ಬಹಳ ಸುಲಭವಾಗಿ ತಜ್ಞರ ಅಗತ್ಯವೇ ಇಲ್ಲದೆ ಗುರುತಿಸಬಹುದಾದಷ್ಟು ಸ್ಪಷ್ಟವಾಗಿ ಬೆದೆ ಲಕ್ಷಣಗಳು ತೋರುತ್ತವೆ. ಆದರೆ ಗರ್ಭಧಾರಣೆ ಸ್ವಲ್ಪ ಕಷ್ಟ, ಮೊದಲನೆ ಬೆದೆ ಬರುವುದು 20-24 ತಿಂಗಳುಗಳಲ್ಲಿ. 36 ತಿಂಗಳಲ್ಲಿ ಮೊದಲ ಕರು. ಕರು ಈದ ನಂತರ ಸುಮಾರು 300-320 ದಿನ ಹಾಲು ಕೊಡುತ್ತದೆ. 12-15 ವರ್ಷಗಳ ಆಯಸ್ಸಿನಲ್ಲಿ 6-10 ಕರು ಈಯುತ್ತದೆ. ಕರು ಹೆಣ್ಣಾದರೆ ಉತ್ತಮ. ಗಂಡಾದರೂ ಸಹ ಸದ್ಯಕ್ಕೆ ಹೋರಿಯ ರೂಪದಲ್ಲಿ ಮಾರುಕಟ್ಟೆ ಇದೆ.
ಗೀರ್‌ನ ವಿದೇಶಿ ಆವೃತ್ತಿಯ ಹೆಸರು ಬ್ರಹ್ಮನ್. ಹೀಗೆ ಇದು ಮನ್ನಣೆಗಳಿಸಲು ಕಾರಣವಾದದ್ದು ಅದರ ರೋಗನಿರೋಧಕ ಶಕ್ತಿ ಮತ್ತು ಹಾಲು ಕೊಡುವ ಸಾಮರ್ಥ್ಯ. ಬ್ರಾಜಿಲ್ ದೇಶವೂ ಸಹ ಗಿರ್ ತಳಿ ಒಯ್ದು ಅಲ್ಲಿನ ತಳಿಗಳಿಗೆ ಸಂಕರಣ ಮಾಡಿಕೊಂಡಿದೆ. ಈಗ ಅವನ್ನೆಲ್ಲಾ ಮಾಂಸಕ್ಕಾಗಿ ಬಳಸುತ್ತಿರುವುದು ತೆರೆಯ ಹಿಂದಿನ ವಿಷಯ. ಅನೇಕ ದೇಶಗಳು ಈ ತಳಿಯನ್ನು ಕೊಂಡೊಯ್ದರೂ ಅವು ಹಾಲಿಗಲ್ಲ. ಇದರಿಂದ ದೊರಕುವ ಪುಷ್ಖಳ ಮಾಂಸಕ್ಕಾಗಿ ಅನ್ನುತ್ತದೆ ವರದಿ!
ಗಿರ್ ತಳಿ ಸಾಕುವವರ ಹಿನ್ನೆಲೆ ವಿಚಾರಿಸಿದಾಗ ಬಹುತೇಕ ಜನ ಅದರ ಹಾಲಿನ ಉತ್ಪನ್ನದಲ್ಲಿ ಬದುಕಬೇಕೆಂಬ ಕಟ್ಟು ಪಾಡು ಇರದವರು ಮತ್ತು ಇತರ ಮೂಲದ ಉತ್ಪನ್ನ ಹೊಂದಿ, ಇದರ ಸಾಕಣೆಯಿಂದ ನಷ್ಟ ಬಂದರೂ ಭರಿಸುವ ಶಕ್ತಿ ಇರುವವರರು ಎನ್ನುವುದು ಗಮನಾರ್ಹ ವಿಷಯ.
ಕಳೆದ ೧೦ ವರ್ಷಗಳಿಂದ ಈವರೆಗೆ ಹಲವಾರು ಗಿರ್ ಆಕಳುಗಳ ಸಾಕಣೆಗಾರರ ಅನೇಕ ಹಸುಗಳನ್ನು ಗಮನಿಸಿ, ಅಧ್ಯಯನ ನಡೆಸಿದಾಗ ಕೆಲವೊಂದು ಅಂಶಗಳು ಕಂಡು ಬಂದಿವೆ. ಅದನ್ನು ಇನ್ನು ಮುಂದೆ ಗಿರ್ ಸಾಕುವವರ ಗಮನಕ್ಕೆ ತರುವುದು ಒಳ್ಳೆಯದೆನಿಸಿತು..
ಒಂದಿಷ್ಟು ತೊಂದರೆಗಳಿವೆ; ಗಮನಿಸಿ.
೧) ಗಿರ್ ಇದು ದೇಶಿ ತಳಿಯಾದದ್ದರಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದೆಯೇ?
ಉತ್ತರ:
ಗಿರ್ ತಳಿ ರೋಗ ನಿರೋಧಕ ಶಕ್ತಿ ಹೊಂದಿದೆ ಅಂದರೂ ಹೈನುರಾಸುಗಳ ಅದರಲ್ಲೂ ಹೆಚ್ಚು ಹಾಲು ಹಿಂಡುವ ತಳಿಗಳಾದ ಜರ್ಸಿ ಮತ್ತು ಹೆಚ್ಎಫ್ ಗೆ ಬರುವ ಮಾರಕ ಕೆಚ್ಚಲು ಬಾವು ಎಂಬ ಮಹಾಮಾರಿ ಇದಕ್ಕೂ ಬಂದೇ ಬರುತ್ತದೆ. ಮೊದಲಿಗೆ ಮಂದಸ್ವರೂಪದಲ್ಲಿರುವ ಕೆಚ್ಚಲು ಬಾವು ನಂತರ ಚಿಕಿತ್ಸೆ ಮಾಡದಿದ್ದರೆ ತೀವ್ರತರವಾದ ಗಟ್ಟಿಯಾಗುವ ಕೆಚ್ಚಲು ಬಾವಾಗಿ ಪರಿವರ್ತನೆಗೊಳ್ಳುತ್ತದೆ. ಈ ಹಂತದಲ್ಲಿ ಇದರ ಚಿಕಿತ್ಸೆ ಕಷ್ಟ ಸಾಧ್ಯ. ನಮ್ಮ ಸಂಶೋಧನೆಯಲ್ಲಿ ಮಂದ ಸ್ವರೂಪದ ಕೆಚ್ಚಲು ಬಾವು ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಿದ ಶೇ:30 ರಷ್ಟು (ಇದು ದೊಡ್ಡ ಸಂಖ್ಯೆ ಗಮನವಿರಲಿ) ಗಿರ್ ಆಕಳುಗಳಲ್ಲಿ ಕಂಡು ಬಂದಿದೆ. ಇದಕ್ಕೆ ಕಾರಣ ಹಲವು. ಗಿರ್ ಹಸುವಿನ ಮೊಲೆಯ ಗಾತ್ರವು ಬಹಳ ದೊಡ್ಡದಾಗಿದ್ದು ಅದಕ್ಕೆ ಇರುವ ಹಾಲು ಹಿಂಡುವ ರಂದ್ರವು ದೊಡ್ಡದಿರುತ್ತದೆ. ಇದರಿಂದ ಕೆಚ್ಚಲು ಬಾವು ಉಂಟುಮಾಡುವ ಸೂಕ್ಷ್ಮಾಣುಗಳು ಕೆಚ್ಚಲಿಗೆ ದಾರಿ ಕಂಡುಕೊಳ್ಳಲು ಸುಲಭವಾಗುತ್ತದೆ. ಈ ರೀತಿಯ ಕೆಚ್ಚಲು ಬಾವನ್ನು ಸರ್ಫ್ ಕೆಚ್ಚಲು ಪರೀಕ್ಷೆ ಮಾಡಿ ರೈತರೇ ಪತ್ತೆ ಮಾಡಿ ಚಿಕಿತ್ಸೆ ಕೊಡಿಸಬಹುದು.
೨. ಇದಕ್ಕೆ ಕಾಯಿಲೆಯ ಪ್ರಮಾಣ ಕಡಿಮೆಯೇ?
ಉತ್ತರ:
ಹಾಗೇನೂ ಇಲ್ಲ. ಗುಜರಾತಿನ ಗೌಳಿಗರ ಮಂದೆಯಿಂದ ನೇರವಾಗಿ ತಂದ ಅನೇಕ ಹಸುಗಳ ಮತ್ತು ಹೋರಿಗಳ ರಕ್ತವನ್ನು ಪರೀಕ್ಷೆ ಮಾಡಿದಾಗ ಅವುಗಳಲ್ಲಿ “ಬ್ರುಸೆಲ್ಲೋಸಿಸ್” ಅಥವಾ “ಕಂದು ರೋಗ” ಕಂಡು ಬಂದಿದೆ. ಇವು ಪದೇ ಪದೇ ಗರ್ಭಪಾತ ಹೊಂದುತ್ತವೆ. ಅದಲ್ಲದೇ ಜಾನುವಾರುಗಳಿಂದ ಮನುಷ್ಯನಿಗೆ ಹಾಲು ಮತ್ತು ಮೂತ್ರದ ಬರುವ ಒಂದು ಪತ್ತೆ ಹಚ್ಚಲಾಗದ ಮಾರಕ ರೋಗ. ಇದು ಒಮ್ಮೆ ಜಾನುವಾರಿಗೆ ಬಂದರೆ ಗುಣ ಮಾಡುವುದು ಕಷ್ಟ. ಈ ರೀತಿಯ ಆಕಳುಗಳು ಬೆದೆಗೆ ಬಂದಾಗ ಹೋರಿಯಿಂದ ಗರ್ಭಧಾರಣೆ ಮಾಡಿಸಿದರೆ ಆ ಹೋರಿಗೂ ಕಾಯಿಲೆ ತಗಲಿ ಅದು ಗರ್ಭಧಾರಣೆ ಮಾಡಿದ ಎಲ್ಲಾ ಆಕಳುಗಳಿಗೆ ಈ ರೋಗ ಸಾಂಕ್ರಾಮಿಕವಾಗಿ ಹರಡಿದ ಅನೇಕ ನಿದರ್ಶನಗಳಿವೆ. ಬಹುತೇಕ ಪಶುಪಾಲಕರಿಗೆ ಈ ರೋಗ ಅವರ ಗಿರ್ ಆಕಳುಗಳಿಗೆ ಬಂದಿರುವ ವಿಷಯವೇ ಗೊತ್ತಿರುವುದಿಲ್ಲ !. ಈ ರೋಗ ಬಂದ ಜಾನುವಾರುಗಳನ್ನು ಸುಖಮರಣಕ್ಕೆ ಈಡು ಮಾಡುವುದೊಂದೇ ಉಪಾಯ ಎನ್ನುತ್ತದೆ ವಿಜ್ಞಾನ. ಆದರೂ ಸಹ ಮನುಷ್ಯನಲ್ಲಿ ಈ ರೋಗವನ್ನು ಬಹುತೇಕ ಗುಣ ಮಾಡುವ ಔಷಧಿಗಳಿದ್ದು ಇವುಗಳನ್ನು ಜಾನುವಾರುಗಳಲ್ಲಿ ಉಪಯೋಗಿಸುವುದಕ್ಕೆ ಕೆಲವು ತಾಂತ್ರಿಕ ಅಡಚಣೆಗಳು ಹಾಗೂ ಚಿಕಿತ್ಸೆಯ ವೆಚ್ಚ ತುಂಬಾ ಜಾಸ್ತಿ ಆಗುವುದರಿಂದ ಈ ಕುರಿತು ಸಂಶೋಧನೆ ನಡೆದಿದೆ. ಕೆಲವು ಗಿರ್ ಆಕಳುಗಳಲ್ಲಿ ಕ್ಷಯ ರೋಗವಿರುವುದೂ ಸಹ ಸಂಶೋಧನೆಯಿಂದ ಪತ್ತೆಯಾಗಿದೆ. ಆದರೆ ಇದರ ಪ್ರಮಾಣ ಬ್ರುಸೆಲ್ಲೋಸ್ಸಿಗೆ ಹೋಲಿಸಿದರೆ ಕಡಿಮೆ.
೩). ಗರ್ಭಧಾರಣೆಯ ಸಮಸ್ಯೆ ಇದೆಯೇ?
ಉತ್ತರ:
ಇವುಗಳು ಸುಲಭ ಸಾಧ್ಯಕ್ಕೆ ಕೃತಕ ಗರ್ಭಧಾರಣೆಗೆ ಕಟ್ಟುವುದಿಲ್ಲ. ಇವುಗಳ ಗರ್ಭಕೋಶ ಕಂಠ ಬಹಳ ದೊಡ್ಡದಾಗಿದ್ದು ಕೃತಕ ಗರ್ಭಧಾರಣೆಯ ನಳಿಕೆಯನ್ನು ಗರ್ಭಕೋಶದೊಳಗೆ ತೂರಿಸಿ ಕೃತಕ ಗರ್ಭಧಾರಣೆ ಮಾಡುವುದು ಪಳಗಿಲ್ಲದವರಿಗೆ ಕಷ್ಠ. ಇವು ಹೋರಿಯಿಂದ ನೈಸರ್ಗಿಕ ಗರ್ಭಧಾರಣೆಗೆ ಹೊಂದಿಕೊಂಡಿರುವುದರಿಂದ ಕೃತಕ ಗರ್ಭಧಾರಣೆಗೆ ಗರ್ಭ ಧರಿಸದೇ ಅನೇಕ ಹೈನುಗಾರರು ಹೈರಾಣಾಗುತ್ತಾರೆ. ಒಂದೆರಡು ಆಕಳು ಸಾಕಿದವರು ಹೋರಿಯನ್ನು ಸಾಕುವುದು ಬಹಳ ಕಷ್ಟವಾಗಿರುವುದರಿಂದ ಇದೊಂದು ಪಶುವೈದ್ಯರಿಗೆ ಹಾಗೂ ಸಾಕಣೆಗಾರರಿಗೆ ದೊಡ್ಡ ಸವಾಲಾಗಿಯೇ ಉಳಿಯುತ್ತದೆ. ಈ ಕುರಿತು ನಡೆಸಿದ ಸಂಶೋಧನೆಯಲ್ಲಿ ಕೆಲವು ಹಾರ್ಮೋನುಗಳನ್ನು ಅತ್ಯಂತ ವಬಳಸಿದರೆ ಮಾತ್ರ ಉತ್ತಮ ಫಲಿತಾಂಶ ಕಂಡು ಬಂದಿರುವುದನ್ನು ಗಮನಿಸಿದೆ.
೪) ಇವುಗಳ ಸ್ವಭಾವ ಹೇಗಿದೆ?
ಉತ್ತರ:
ಎಲ್ಲ ಭಾರತೀಯ ತಳಿಗಳಿಗೆ ನೈಸರ್ಗಿಕವಾಗಿಯೇ ಇರುವ ಹಾಯುವ ಒದೆಯುವ ಸ್ವಭಾವ ಇವುಗಳಿಗೂ ಇರುತ್ತದೆ. ಇವು ಇತರ ಭಾರತೀಯ ತಳಿಗಳಿಗೆ ಹೋಲಿಸಿದರೆ ಸ್ವಲ್ಪ ಸಾದು ಸ್ವಭಾವದವಾದರೂ ಸಹ ಕೆಲವೊಮ್ಮೆ ಇದ್ದಕ್ಕಿದ್ದಂತೆ ರೋಷದಿಂದ ಅವುಗಳ ಗುಣಸ್ವಭಾವಕ್ಕೆ ತಕ್ಕಂತೆ ಅವುಗಳ ಶಕ್ತಿಯುಕ್ತ ಬಲವಾದ ಕಾಲುಗಳಿಂದ ಒದೆಯುವ ಸ್ವಭಾವ ಹೊಂದಿರುವುದರಿ೦ದ ಅನೇಕರು ಎಚ್ಚರ ವಹಿಸದೇ ಪೆಟ್ಟು ತಿಂದಿದ್ದೂ ಇದೆ. ಅದರಲ್ಲೂ ಪಶುವೈದ್ಯರನೇಕರು ಇವನ್ನು ಸಾಕಿದವರು “ನಮ್ ದನ ಸಾದು. ಏನೂ ಒದೆಯಲ್ಲ ಬಿಡಿ” ಎಂಬ ಮಾತನ್ನು ನಂಬಿ “ರಪ್” ಎಂಬ ಶಬ್ಧದೊಂದಿಗೆ ಅದರ ಹಿಂಗಾಲಿನ ಸದ್ರಢ ಬಲೀಷ್ಟ ಕಾಲುಗಳ ಹೊಡೆತ ತಿಂದಿದ್ದಿದೆ.
೫) ಕೊಟ್ಟ ಅಹಾರವನ್ನು ಹಾಲನ್ನಾಗಿ ಪರಿವರ್ತಿಸುವ ಸ್ವಭಾವ ಹೇಗೆ?
ಉತ್ತರ:
ಹೈನುಗಾರರ ಶೇ:೬೦ ಕ್ಕಿಂತ ಜಾಸ್ತಿ ವೆಚ್ಚ ಜಾನುವಾರುಗಳ ಪಶುಆಹಾರ ಮತ್ತು ನಿರ್ವಹಣೆಗಾಗಿಯೇ ಆಗುತ್ತದೆ. ಹಾಗಿದ್ದಾಗ ಹಸುಗಳು ನೀಡಿದ ಪಶು ಅಹಾರವನ್ನು ಜಾಸ್ತಿ ಹಾಲನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರಬೇಕು. ಆಗ ಸ್ವಲ್ಪ ಉಳಿತಾಯವಾಗಬಹುದು. ಇವುಗಳ ದೇಹ ತೂಕ ಮತ್ತು ಗಾತ್ರ ಮಿಶ್ರತಳಿಗಳಿಗೆ ಹೋಲಿಸಿದರೆ ಸಮ ಅಥವಾ ಜಾಸ್ತಿಯೇ ಇರುತ್ತಿದ್ದು, ಅಹಾರ ಸೇವನೆಯೂ ಸಹ ಇದಕ್ಕೆ ತಕ್ಕಂತೆ ಜಾಸ್ತಿ ಇರುವುದು ಸಹಜ. ಆದರೆ ಅದಕ್ಕೆ ತಕ್ಕಂತೆ ಅಹಾರ ಪರಿವರ್ತನೆಯ ಸಾಮರ್ಥ್ಯೈ ಇರುವುದಿಲ್ಲ. ಅದರಲ್ಲೂ ಗುಜರಾತ್ ರಾಜ್ಯದಲ್ಲಿ ಉಚಿತವಾಗಿ ಹೇರಳವಾಗಿ ಸಿಗುವ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹುಲ್ಲು ಮತ್ತು ಹಿಂಡಿ ನಮ್ಮಲ್ಲಿ ಲಭ್ಯವಿಲ್ಲ. ಅದುದರಿಂದ ನಮ್ಮಲ್ಲಿ ಇವುಗಳ ನಿರ್ವಹಣಾ ವೆಚ್ಚ ತುಂಬಾ ಜಾಸ್ತಿ. ಕಾರಣ ಹಾಲು ಮಾರಿ ಲಾಭ ಗಳಿಸಲು ಇವು ಯೋಗ್ಯವಾಗಲ್ಲ.
ಇಷ್ಟಾದರೂ ಗಿರ್ ದನ ಸಾಕಲೇಬೇಕೆನ್ನುವುರು ಕೆಲವು ಎಚ್ಚರ ವಹಿಸುವುದು ಒಳಿತು.
೧. ನೋಡಲು ಸುಂದರ, ದೇಶಿ, ರೋಗ ನಿರೋಧಕತೆ ಜಾಸ್ತಿ, ಹಾಲು ಅಮೃತ, ಮೂತ್ರದಲ್ಲಿಯೂ ಸಹ ಔಷಧ ಮತ್ತು ಬಂಗಾರವಿದೆ ಎಂಬೆಲ್ಲ ಸುಳ್ಳು ಸುದ್ಧಿಗಳನ್ನು ನಂಬದೇ ಇದೇ ತಳಿಯ ಹಸುವನ್ನೇ ಖರೀದಿಸಬೇಕೆಂಬ ಹಂಬಲವಿದ್ದರೆ ಆದಷ್ಟು ವಿಶ್ವಾಸಿಕರ ಹತ್ತಿರ ಖರೀದಿಸಿರಿ. ಇದಕ್ಕೆ ನೀಡುವ ದುಬಾರಿ ಬೆಲೆಗೆ ತಕ್ಕಂತೆ ಇವುಗಳ ಹಾಲಿನ ಇಳುವರಿ ಇಲ್ಲ.
೨. ದೂರದ ಗುಜರಾತಿನಿಂದ ತಂದ 70-80 ಸಾವಿರ ನೀಡಿ ಗಿರ್ ಹಸು ಖರೀದಿಸುವಲ್ಲಿ ಸ್ವಲ್ಪ ಅಪಾಯ ಜಾಸ್ತಿ. ಹಸು ಖರೀದಿ ಮಾಡುವಾಗ ಅದಕ್ಕೆ ಮಂದ ಸ್ವರೂಪದ ಕೆಚ್ಚಲು ಬಾವು ಇದೆಯೇ ಇಲ್ಲವೇ ಎಂಬುದನ್ನು ಸುಲಭ ಸರ್ಫ್ ಕೆಚ್ಚಲು ಬಾವಿನ ಪರೀಕ್ಷೆ ಮಾಡಿಸಿ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಿಕೊಳ್ಳಿ.
೩. ಬ್ರುಸೆಲ್ಲೋಸಿಸ್ ಕಾಯಿಲೆ ಇದೆಯೇ ಇಲ್ಲವೇ ಎಂಬುದನ್ನು ಸಮೀಪದ ಪ್ರಯೋಗಶಾಲೆಗೆ ನಿಮ್ಮ ಪಶುವೈದ್ಯರ ಮೂಲಕ ಕಳಿಸಿ ಪತ್ತೆ ಮಾಡಿಸಿಕೊಳ್ಳಿ. ಕರು ಹಾಕಿ ಗರ್ಭಧರಿಸಿದೆ ಎಂಬುದನ್ನು ಪಶುವೈದ್ಯರಿಂದ ಖಚಿತ ಪಡಿಸಿಕೊಳ್ಳಿ. ಇದಕ್ಕೆಲ್ಲಾ ದಲ್ಲಾಳಿಯ ಮಾತು ನಂಬಲಾಗದು.
೪. ಹಾಲು ಮಾರಲು ಕೆ ಎಂ ಎಫ್ ಅವಲಂಭಿಸದೇ ಭಾರತೀಯ ತಳಿಯ ಹಸುವಿನ ಹಾಲನ್ನೇ ಕುಡಿಯಲು ಇಷ್ಟ ಪಡುವ, ಅಥವ ಹಾಲಿಗೆ ಜಾಸ್ತಿ ದರವಾದರೂ ಸರಿ, ಖರೀದಿಸುವ ಸಾಮರ್ಥ್ಯವುಳ್ಳವರನ್ನು ಹುಡುಕಿ, ನಿಮ್ಮದೇ ಮಾರುಕಟ್ಟೆಯನ್ನು ಮಾಡಿಕೊಳ್ಳಿ. ಇದರ ತುಪ್ಪದ ವಿಷಯದಲ್ಲೂ ಸಹ ಇದೇ ಮಾನದಂಡ ಅನುಸರಿಸಿ.
೫. ದೇಶಿ ತಳಿ ಸಾಕಲೇಬೇಕೆಂಬ ಅದಮ್ಯ ಉತ್ಸಾಹವಿದ್ದರೆ ನಿಮಗೆ ದೇಶಿಯಾದ ಸ್ಥಳೀಯ ತಳಿಗಳನ್ನು ಸಾಕಿ, ಅವುಗಳಿಂದ ಎಷ್ಟು ಬರುತ್ತೋ ಅಷ್ಟು ಹಾಲು ಕರೆದುಕೊಳ್ಳಿ. ದೇಶಿ ತಳಿಯೆಂಬ ಮತ್ತು ನೋಡಲು ಸುಂದರವೆಂಬ ಕಾರಣಕ್ಕೆ ಈ ತಳಿ ಸಾಕಲು ಹೋಗಬೇಡಿ. ಕಾಂಕ್ರೆಜ್, ಗಿರ್, ದೇವಣಿ ಇತ್ಯಾದಿಗಳು ನಮಗೆ ಭಾರತೀಯ ತಳಿಗಳಾಗಬಹುದೇ ಹೊರತು “ದೇಶಿ” ತಳಿ ಆಗಲು ಸಾಧ್ಯವಿಲ್ಲ. ಅಷ್ಟಕ್ಕೂ ದೇಶಿ ತಳಿಯನ್ನೇ ಉತ್ತೇಜಿಸಬೇಕೆಂದರೆ ನಮ್ಮ ದೇಶದ್ದೆ ಆದ, ಕಸವನ್ನು ತಿಂದರೂ ಉತ್ತಮ ಹಾಲನ್ನು ನೀಡುವ, ಜೀವನದಲ್ಲಿ ಕೆಚ್ಚಲು ಬಾವೆಂಬ ರೋಗಕ್ಕೆ ತುತ್ತಾಗದ, ಹಾಲಿನಲ್ಲಿ ಶೇ ೯.೫ ರಷ್ಟು ಕೊಬ್ಬಿನ ಅಂಶವಿರುವ ರುಚಿಯಾದ ಹಾಲು ನೀಡುವ ನಮ್ಮ ಹೆಮ್ಮೆಯ ಎಮ್ಮೆಯನ್ನು ಸಾಕಿ. ಅದನ್ನು ಕಟ್ಟಿದ ಕೊಟ್ಟಿಗೆಯನ್ನು ಕಾಯಲು ನಮ್ಮದೇ ಆದ ಕಂತ್ರಿ ಅಲ್ಲಲ್ಲ “ಕಂಟ್ರಿ” ನಾಯಿಯನ್ನೇ ಸಾಕಿ.
ಆದಷ್ಟು ಸಾಧು ಸ್ವಭಾವದ ಒದೆಯದ, ಹಾಯದ, ಜಾಸ್ತಿ ಹಾಲು ನೀಡಿ ಖಾತೆಯಲ್ಲಿ ಒಂದಿಷ್ಟು ಹಣ ಉಳಿಸುವ, ಹಸುಗಳನ್ನೇ ಖರೀದಿಸಿ. ಕೊನೆಗೆ ಎಲ್ಲರಿಗೂ ಆರ್ಥಿಕ ಏಳ್ಗೆಯೇ ಬಹಳ ಮುಖ್ಯ. ಏಕೆಂದರೆ ನಂತರ ಬರುವ ತೊಂದರೆಗಳನ್ನೆಲ್ಲಾ ಸಾಕುವವರೇ ಎದುರಿಸಬೇಕೆಲ್ಲವೇ?
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಪ್ರೊ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ