ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಿ ತ್ಯಾಜ್ಯ ವಿಲೇವಾರಿಯನ್ನು ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇದುವರೆಗೆ 271 ಗ್ರಾಮ ಪಂಚಾಯತ್‍ಗಳ ಪೈಕಿ ಕೇವಲ 53 ಗ್ರಾಮ ಪಂಚಾಯತ್‍ಗಳು ಘನತ್ಯಾಜ್ಯ ಘಟಕಗಳಿಗೆ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದು, 48 ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದೆ. ಕೇವಲ 12ಗ್ರಾಮ ಪಂಚಾಯತ್‍ಗಳು ಕಾರ್ಯ ಆರಂಭಿಸಿದ್ದು, ಜಮೀನು ಅಂತಿಮಗೊಳಿಸದ ಗ್ರಾಮ ಪಂಚಾಯತ್‍ಗಳು ತಮ್ಮಲ್ಲಿರುವ ಹಳೆ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಆರಂಭಿಸಬೇಕು. ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಗ್ರಾಮ ಪಂಚಾಯತ್‍ಗಳು ವಾಹನ ಖರೀದಿ, ಬಕೆಟ್ ಖರೀದಿ, ಶೆಡ್ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಪ್ರತಿ ಮನೆಗೆ ಕುಡಿಯುವ ನೀರು: ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಮನೆ ಮನೆಗೆ ಗಂಗೆ ಯೋಜನೆಯಡಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಈಗಾಗಲೇ ನಲ್ಲಿ ಸಂಪರ್ಕ ಇರುವ ಮನೆಗಳನ್ನು ಹೊಸದಾಗಿ ಕ್ರಿಯಾ ಯೋಜನೆಯಲ್ಲಿ ಸೇರಿಸಬಾರದು. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯವನ್ನು ಆಯಾ ಗ್ರಾಮ ಪಂಚಾಯತ್‍ಗಳೇ ಇನ್ನು ಮುಂದೆ ನಿರ್ವಹಿಸಬೇಕು. ಇದಕ್ಕಾಗಿ ಅನುದಾನವನ್ನು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಪಿಡಿಒಗಳಿಗೆ ಎಚ್ಚರಿಕೆ: ಕೆಲವು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೆ, ಶಿವಮೊಗ್ಗ ನಗರದಲ್ಲಿ ವಾಸ್ತವ್ಯವಿದ್ದು ದೂರವಾಣಿಗೂ ಸಿಗದಿರುವ ಬಗ್ಗೆ ದೂರುಗಳು ಬರುತ್ತಿವೆ. ಪಿಡಿಒಗಳು ಕಡ್ಡಾಯವಾಗಿ ಪ್ರತಿದಿನ ಕಚೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರಿಗೆ ಸ್ಪಂದಿಸಬೇಕು. ತಮ್ಮ ವರ್ತನೆಯನ್ನು ತಿದ್ದಿಕೊಳ್ಳದ ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಉದ್ಯೋಗ ಖಾತ್ರಿ ಅನುಷ್ಟಾನ: ಎನ್‍ಆರ್‍ಇಜಿ ಅಡಿ ಈ ವರ್ಷ 218 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಎಲ್ಲಾ ಇಲಾಖೆಗಳು ತಮಗೆ ನಿಗದಿಪಡಿಸಿರುವ ಮಾನವ ದಿನಗಳ ಗುರಿಯನ್ನು ಪೂರ್ಣಗೊಳಿಸಬೇಕು. ಸಾಮಾಜಿಕ ಅರಣ್ಯ ಇಲಾಖೆ ಇದುವರೆಗೆ ಯಾವುದೇ ಗುರಿಯನ್ನು ಸಾಧಿಸಿರುವುದಿಲ್ಲ. ಹಿಂದಿನ ವರ್ಷದ ಅಪೂರ್ಣ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಸಚಿವರು ಹೇಳಿದರು.

ತೆರಿಗೆ ನಿಗದಿ ವೈಜ್ಞಾನಿಕವಾಗಿ ಮಾಡಿ: ಪ್ರತಿ ಗ್ರಾಮ ಪಂಚಾಯತ್‍ಗಳು ಎರಡು ವರ್ಷಗಳಿಗೊಮ್ಮೆ ಮೌಲ್ಯ ಮಾಪನ ಮಾಡಿ ತೆರಿಗೆಯನ್ನು ವೈಜ್ಞಾನಿಕವಾಗಿ ಮರು ನಿಗದಿಪಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅತೀಕ್ ತಿಳಿಸಿದರು.
ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್, ಸಿಇಒ ಎಂ.ಎಲ್.ವೈಶಾಲಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!