ಇಂದು, ನಾಳೆ ಸ್ಟೆಪ್‌ ಹೋಲ್ಡರ್ಸ್ ಬೃಹತ್‌ ಅನ್ವೇಷಣಾ ಕಾರ್ಯಕ್ರಮ

ಶಿವಮೊಗ್ಗ: ಸ್ಟೆಪ್‌ ಹೋಲ್ಡರ್ಸ್ ಡ್ಯಾನ್ಸ್ ಸ್ಟುಡಿಯೋ ಶಿವಮೊಗ್ಗ , ರೌಂಡ್‌ ಟೇಬಲ್ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗಷ್ಟೇ ಅಕಾಲಿಕ ಮರಣ ಹೊಂದಿದ ಖ್ಯಾತ ಯುವ ಉದ್ಯಮಿ ಶರತ್‌ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ.ಹೆಚ್‌. ಎಸ್‌. ಸತೀಶ್‌ ಅವರ ಸ್ಮರಣಾರ್ಥ ವಿವಿಧ ಸ್ಪರ್ಧೆ ಹಾಗೂ ಸ್ಟೆಪ್‌ ಹೋಲ್ಡರ್ಸ್ ಎರಡು ದಿನ ಬೃಹತ್‌ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ.

ಸ್ಟೆಪ್‌ ಹೋಲ್ಡರ್ಸ್ ಡ್ಯಾನ್ಸ್ ಸ್ಟುಡಿಯೋ ಕಳೆದ 14 ವರ್ಷಗಳಿಂದ ಶಿವಮೊಗ್ಗದಲ್ಲಿ ಡ್ಯಾನ್ಸ್ ತರಬೇತಿ ನೀಡುತ್ತಾ ಬಂದಿದೆ.

ವಾರ್ಷಿಕೋತ್ಸದ ಅಂಗವಾಗಿ ಅನ್ವೇಷಣಾ ಹೆಸರಿನಲ್ಲಿ ಬೃಹತ್‌ ಡ್ಯಾನ್ಸ್ ಕಾರ್ಯಕ್ರಮವನ್ನು ಇದೇ ಫೆ. 18 ರ ಸಂಜೆ 5.30 ಕ್ಕೆ ಹಾಗೂ 19 ರಂದು ಸಂಜೆ 5.30ಕ್ಕೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿ ಕೊಳ್ಳಲಾಗಿದೆ.

ಡ್ಯಾನ್ಸ್ ತರಬೇತಿ ಪಡೆದ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶವನ್ನು ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಪುಟ್ಟ ಗುಡಿಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಗುಡಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಅನ್ವೇಷಣಾ ಕಾರ್ಯಕ್ರಮವು ವಿಶಿಷ್ಟವಾಗಿ ನಡೆಯಲಿದೆ.
ಪೌರಾಣಿಕ ಕತೆ ಆಧರಿಸಿದ ಸಂಪೂರ್ಣ ರಾಮಾಯಣ, ಸುಭಾಷ್‌ ಚಂದ್ರಬೋಸ್‌ ಅವರ ಜೀವನಾಧಾರಿತ ಡ್ಯಾನ್‌ರ‍ಸ ಸೇರಿದಂತೆ ವೈವಿಧ್ಯಮಯ ನೃತ್ಯಗಳನ್ನು ಮಕ್ಕಳು ಪ್ರದರ್ಶನ ಮಾಡಲಿದ್ದಾರೆ. ಏಕಕಾಲದಲ್ಲಿ ಮೂರು ವೇದಿಕೆಯಲ್ಲಿ ಡ್ಯಾನ್ಸ್ ಹಾಗೂ ರೋಪ್‌ ಮಾದರಿಯಲ್ಲೂ ಡ್ಯಾನ್ಸ್ ಪ್ರದರ್ಶನ ನಡೆಯಲಿದೆ.

ಇದೇ ಸಂದರ್ಭ ಖ್ಯಾತ ಯುವ ಉದ್ಯಮಿ ಶರತ್‌ ಭೂಪಾಳಂ ಅವರ ಸ್ಮರಣಾರ್ಥ ರನ್‌ ಶಿವಮೊಗ್ಗ ಕಾರ್ಯಕ್ರಮದಡಿಯಲ್ಲಿ 19 ರಂದು ಬೆಳಗ್ಗೆ 6 ಗಂಟೆಗೆ ಜೈಲ್‌ ರಸ್ತೆಯ ಫ್ರೀಡಂ ಪಾರ್ಕ್‌ ಆವರಣದಿಂದ ಶಿವಮೊಗ್ಗ ರನ್‌ ಹೆಸರಿನಲ್ಲಿ 4 ಕಿ.ಮೀ. ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್‌ ಜೈಲ್‌ ಗೇಟ್‌ನಿಂದ ಆರಂಭಗೊಂಡು ಉಷಾ ನರ್ಸಿಂಗ್‌ ಹೋಂ, ನೆಹರೂ ಸ್ಟೇಡಿಯಂ ಸರ್ಕಲ್‌, ನಂತರ ಜೈಲ್‌ ಸರ್ಕಲ್‌ ಮಾರ್ಗವಾಗಿ ಮರಳಿ ಫ್ರೀಡಂ ಪಾರ್ಕ್‌ ಸೇರಲಿದೆ. ಮಕ್ಕಳ ವಿಭಾಗ, ಮಹಿಳೆಯರು ಹಾಗೂ ಪುರುಷರು ಹೀಗೆ ಮೂರು ವಿಭಾಗದಲ್ಲಿ ಮ್ಯಾರಥಾನ್‌ ನಡೆಯಲಿದೆ.
300 ಮಂದಿಗೆ ಟೀ ಶರ್ಟ್‌ನ್ನು ನೀಡಲಾಗುವುದು. ಮ್ಯಾರಥಾನ್‌ ಕಾರ್ಯಕ್ರಮ ಸಂಪೂರ್ಣವಾಗಿ ರೌಂಡ್‌ ಟೇಬಲ್‌ ಶಿವಮೊಗ್ಗ ಘಟಕ ನಡೆಸಿಕೊಡಲಿದೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು.

ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಮಕ್ಕಳ ತಜ್ಞರಾಗಿದ್ದ ಡಾ.ಹೆಚ್‌.ಎಸ್‌. ಸತೀಶ್‌ ಅವರ ಸ್ಮರಣಾರ್ಥ ಶಿವಮೊಗ್ಗ ಸರ್ಜಿ ಫೌಂಡೇಶನ್‌ ವತಿಯಿಂದ ಫೆ. 19 ರಂದು ಗಾಳಿಪಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಲಿಟಲ್‌ ಪ್ರಿನ್ಸ್ ಆಫ್‌ ಶಿವಮೊಗ್ಗ ಹಾಗೂ ಲಿಟಲ್‌ ಪ್ರಿನ್ಸಸ್ ಆಫ್‌ ಶಿವಮೊಗ್ಗ ಹೀಗೆ ಎರಡು ವಿಭಾಗದಲ್ಲಿ ವಿವಿಧ ವಯೋಮಿತಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. 3 ರಿಂದ 5ವರ್ಷದವರಿಗೆ, 6 ರಿಂದ 10 ವರ್ಷದವರಿಗೆ ಹಾಗೂ 11 ರಿಂದ 15 ವರ್ಷದವರ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯರೆಗೆ ಸ್ಪರ್ಧೆ ನಡೆಯಲಿದೆ. ಮಕ್ಕಳಿಗೆ ಶರತ್‌ ಭೂಪಾಳಂ ಹಾಗೂ ಡಾ.ಸತೀಶ್‌ ಅವರ ಭಾವಚಿತ್ರದ ಗಾಳಿಪಟ ಮತ್ತು ದಾರ ನೀಡಲಾಗುವುದು. ವಿಜೇತರಿಗೆ ಪದಕ ನೀಡಲಾಗುವುದು. ಅಲ್ಲದೇ ಸಸಿಗಳನ್ನು ವಿತರಿಸಲಾಗುವುದು.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ 7406667848 ಅಥವಾ 7406667849 ನಂಬರ್‌ಗೆ ಸಂಪರ್ಕಿಸಬಹುದು. ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

error: Content is protected !!