ಶಿವಮೊಗ್ಗ, ಏಪ್ರಿಲ್ 02 : ಸಾರ್ವಜನಿಕ ಉಪಯುಕ್ತತಾ ಸೇವೆಗಳಲ್ಲಿನ ಲೋಪ ಹಾಗೂ ನ್ಯೂನತೆಗಳ ಕುರಿತು ನ್ಯಾಯಾಲಯದಲ್ಲಿ ದಾಖಲಿಸಲಾಗುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಖಾಯಂ ಜನತಾ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿ ಶೀಘ್ರಗತಿಯ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ್ ಹಂಚಾಟೆ ಅವರು ಹೇಳಿದರು.
ಅವರು ಇಂದು ಬೆಂಗಳೂರಿನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ಜಿಲ್ಲೆಗಳ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಖಾಯಂ ಜನತಾ ನ್ಯಾಯಾಲಯಗಳಲ್ಲಿ ವಿವಾದಾಸ್ಪದ ಪಕ್ಷಗಳ ತೃಪ್ತಿಯೊಂದಿಗೆ ಸಾರ್ವಜನಿಕ ಉಪಯುಕ್ತತೆಗಳ ವಿವಾದಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಅಲ್ಲದೇ ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ವಿವಾದದ ಸೌಹಾರ್ಧಯುತವಾಗಿ ನೆಲೆಸುವ ಪ್ರಯತ್ನದಲ್ಲಿ ಪಕ್ಷಗಳಿಗೆ ಸಹಾಯವಾಗಲಿದೆ ಎಂದ ಅವರು, ಒಂದು ಕೋಟಿ ರೂ. ಮೌಲ್ಯದೊಳಗಿನ ಪ್ರಕರಣಗಳನ್ನು ದಾಖಲಿಸಿದ ಕಕ್ಷಿದಾರರು 2-3ತಿಂಗಳ ಅವಧಿಯೊಳಗಾಗಿ ತೀರ್ಪು ನಿರೀಕ್ಷಿಸಬಹುದಾಗಿದೆ ಎಂದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯುಮಾರ್ಗ, ರಸ್ತೆ ಅಥವಾ ನೀರಿನ ಮೂಲಕ ಸಾಗಿಸುವ ಸಾಗಾಣಿಕೆಯ ಸೇವೆ, ಅಂಚೆ, ದೂರವಾಣಿ, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ, ವಿತರಣೆ, ವಿಮೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆ, ವಸತಿ ಮತ್ತು ರಿಯಲ್ ಎಸ್ಟೇಟ್ ಸೇವೆ, ಶಿಕ್ಷಣಕ್ಕೆ ಸಂಬಂಧಿಸಿದ ಉಪಯುಕ್ತಕಾ ಸೇವೆಗಳಲ್ಲಿನ ಲೋಪ, ನಷ್ಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಬಹುದಾಗಿದೆ ಎಂದವರು ನುಡಿದರು.
ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ವಿಭಾಗೀಯ ನ್ಯಾಯಾಲಯಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿನ ಸೇವಾ ನ್ಯೂನತೆಗಳಿಂದ ಬಾಧಿತರಾದವರು ತಮ್ಮ ಪ್ರಕರಣಗಳನ್ನು ಶೀಘ್ರ ವಿಲೇವಾರಿಗಾಗಿ ಮಂಗಳೂರಿನ ಖಾಯಂ ಜನತಾ ನ್ಯಾಯಾಲಯದಲ್ಲಿ ಹೂಡಬಹುದಾಗಿದೆ ಎಂದವರು ನುಡಿದರು.
ಈ ನ್ಯಾಯಾಲಯವು ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದ ಅಥವಾ ಜಿಲ್ಲಾ ನ್ಯಾಯಾಧೀಶರಿಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರನ್ನು ಅದರ ಅಧ್ಯಕ್ಷರನ್ನಾಗಿ ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಅನುಭವ ಹೊಮದಿರುವ ಇಬ್ಬರು ವ್ಯಕ್ತಿಗಳನ್ನು ಸದಸ್ಯರನ್ನಾಗಿ ಹೊಂದಿರುತ್ತದೆ.
ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸಾರ್ವಜನಿಕ ಉಪಯುಕ್ತತಾ ಸೇವೆಗಳ ಕುರಿತಂತೆ ಆ ವಿವಾದವನ್ನು ನ್ಯಾಯಲಕ್ಕೆ ಕೊಂಡೊಯ್ಯವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಪಡಿಸಲು ಖಾಯಂ ಜನತಾ ನ್ಯಾಯಾಲಯಕ್ಕೆ ಅವಕಾಶವಿರುವುದಿಲ್ಲ. ಅಂತೆಯೇ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷಕಾರನು ನ್ಯಾಯಾಲಯಕ್ಕೆ ಹೋಗುವಂತಿಲ್ಲ ಎಂದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ಹೊರಡಿಸುವ ಪ್ರತಿಯೊಂದು ಐತೀರ್ಪನ್ನು ಸಿವಿಲ್ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು. ಪ್ರಕರಣದ ಗುಣಾವಗುಣಗಳ ಮೇರೆಗೆ ಅಥವಾ ಇತ್ಯರ್ಥದ ಒಪ್ಪಂದದಿಂದ ಹೊರಡಿಸಲಾದ ಖಾಯಂ ಜನತಾ ನ್ಯಾಯಾಲಯದ ಪ್ರತಿಯೊಂದು ಐತೀರ್ಪು ಅಂತಿಮವಾಗಿದ್ದು, ಸಂಬಂಧಿಸಿದ ಪಕ್ಷಕಾರರು ಮತ್ತು ಅವರ ಮೂಲಕ ಕ್ಲೇಮು ಮಾಡುವ ಪ್ರತಿಯೊಬ್ಬರಿಗೂ ಬಂಧನಕಾರಿಯಾಗಿರಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!