ಶಿವಮೊಗ್ಗ : ಜುಲೈ 29 : ದೇಶದಲ್ಲಿ ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದ ಖಾದ್ಯ ತೈಲ ಬಳಕೆಯಾಗುತ್ತಿರುವುದರಿಂದ ತೈಲಕ್ಕಾಗಿ ಅನ್ಯರಾಷ್ಟ್ರಗಳ ಅವಲಂಬನೆ ಅನಿವಾರ್ಯವಾಗಿದ್ದು, ತೈಲ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ ಎಂದು ತೋಟಗಾರಿಕೆ ಇಲಾಖೆ ನಿದೇಶಕ ಡಾ|| ಕೆ.ನಾಗೇಂದ್ರಪ್ರಸಾದ್ ಅವರು ಹೇಳಿದರು.
ಅವರು ಇಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಅಖಿಲ ಭಾರತ ಸುಸಂಘಟಿತ ಪಾಮ್ಸ್ ಸಂಶೋಧನಾ ಪ್ರಾಯೋಜನೆ(ತಾಳೆ ಬೆಳೆ) ಹಾಗೂ ತೋಟಗಾರಿಕೆ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕೃಷಿ ಮಹಾವಿದ್ಯಾಲಯದ ಡಾ|| ಎಂ.ಎಸ್.ಸ್ವಾಮಿನಾಥನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ತಾಳೆ ಬೆಳೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನರ ದೈನಂದಿನ ಅಗತ್ಯಗಳಿಗೆ ಬೇಕಾಗಿರುವ ಶೇ.50ರಷ್ಟು ತೈಲವನ್ನು ಮಲೇಶಿಯಾ, ಇಂಡೋನೇಶಿಯಾ, ಬ್ರೆಜಿಲ್ ಸೇರಿದಂತೆ ಏಷ್ಯಾದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ತೈಲ ಆಮದಿಗಾಗಿ ಭಾರತ ಪ್ರತಿವರ್ಷ 1,40,000ಕೋಟಿ ರೂ.ಗಳನ್ನು ವ್ಯಯ ಮಾಡುತ್ತಿದೆ. ಪ್ರಸ್ತುತ ಪ್ರತಿವರ್ಷ 25ಮಿಲಿಯನ್ ಮೆಟ್ರಿಕ್ ಟನ್‍ನಷ್ಟು ಖಾದ್ಯ ತೈಲದ ಅಗತ್ಯವಿದ್ದು ಅದರಲ್ಲಿ ಶೇ.11ಮಿಲಿಯನ್ ಮೆಟ್ರಿಕ್ ಟನ್‍ನಷ್ಟು ಮಾತ್ರ ಖಾದ್ಯ ತೈಲವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಅಂದರೆ ಶೇ.50ಕ್ಕಿಂತ ಹೆಚ್ಚಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ಅದಕ್ಕಾಗಿ ಅನ್ಯ ರಾಷ್ಟ್ರಗಳನ್ನು ಅವಲಂಬಿಸಲಾಗುತ್ತಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ 316ದಶಲಕ್ಷ ಟನ್ ಖಾದ್ಯ, 200ದಶಲಕ್ಷ ಟನ್ ತರಕಾರಿ, 100ದಶಲಕ್ಷ ಟನ್ ಹಣ್ಣುಗಳು, 200ದಶಲಕ್ಷ ಟನ್ ಹಾಲು ಉತ್ಪಾದನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದೇವೆ. ಆದರೂ, ನಿರೀಕ್ಷಿತ ಖಾದ್ಯತೈಲಗಳ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಬೇಕಾದ ತುರ್ತು ಅಗತ್ಯವಿದೆ. ಇದೇ ಸಂದರ್ಭದಲ್ಲಿ ಪ್ರತಿ ವರ್ಷ ವ್ಯಕ್ತಿಯೊಬ್ಬ ಬಳಸುತ್ತಿದ್ದ ಖಾದ್ಯ ತೈಲದ ಪ್ರಮಾಣ 13ಕೆ.ಜಿ.ಗಳಿಂದ 19ಕೆ.ಜಿ.ಗೆ ಏರಿಯಾಗಿದೆ ಎಂದು ಸಂಶೋಧನೆಯೊಂದರಿಂದ ತಿಳಿದಿದೆ. ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದರಿಂದ ಸುಮಾರು 80,000ಕೋಟಿ ಗಳಿಗೂ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ ಎಂದರು.
ಈ ಬಗ್ಗೆ ನಡೆದ ಸಂಶೋಧನೆಗಳಿಂದಾಗಿ ಕೇಂದ್ರ ಸರ್ಕಾರವು ತಾಳೆ ಬೆಳೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ. ನೆರೆಯ ರಾಜ್ಯ ಆಂದ್ರಪ್ರದೇಶದಲ್ಲಿ ಬೆಳೆಯ ತಾಳೆಬೆಳೆಯೊಂದಿಗೆ ಅಂತರ ಬೆಳೆಯನ್ನು ಬೆಳೆದು ಹೆಚ್ಚಿನ ಲಾಭ ಗಳಿಸುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಲಾಗಿದೆ. ಈ ಬೆಳೆಗೆ ತಗಲುವ ವೆಚ್ಚ, ಅದರ ವ್ಯವಸ್ಥಿತ ನಿರ್ವಹಣೆ, ತೈಲ ಸ್ವಾವಲಂಬನೆ ಕುರಿತು ಹಲವಾರು ನೀತಿ-ನಿಯಮಗಳನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದವರು ನುಡಿದರು.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್‍ನಲ್ಲಿ ಘೋಷಿಸಿರುವಂತೆ ಸುಮಾರು 25,000ಹೆಕ್ಟೇರ್ ಪ್ರದೇಶದಲ್ಲಿ ತಾಳೆಬೆಳೆ ಕ್ಷೇತ್ರ ವಿಸ್ತರಿಸುವ ಕುರಿತು ಕ್ರಮ ಕೈಗೊಳ್ಳಲಾಗಿದ್ದು, ರೈತರ ಸಕಾಲಿಕ ಸಹಕಾರವೂ ಅಗತ್ಯವಾಗಿದೆ ಎಂದ ಅವರು, ತಾಳೆ ಬೆಳೆ ಕುರಿತು ರೈತರಲ್ಲಿನ ಜಿಜ್ಞಾಸೆಗಳನ್ನು ತೊಡೆದು ಹಾಕಿ, ಪುನಃ ತಾಳೆ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಲಾಭದಾಯಕವನ್ನಾಗಿಸುವ ಕುರಿತು ಮಾಹಿತಿ ನೀಡುವ ಬಗ್ಗೆ ಈಗಾಗಲೇ ಅನೇಕ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ ಎಂದರು.
ಇದೇ ಅವಧಿಯಲ್ಲಿ ರೈತರಿಗೆ ಅಗತ್ಯವಾಗಿರುವ ಗುಣಮಟ್ಟದ ಬೀಜಗಳನ್ನು ಒದಗಿಸುವಲ್ಲಿ ಬೀಜೋತ್ಪಾದಕರು, ಸಂಸ್ಕರಣಾ ಘಟಕಗಳ ಮುಖ್ಯಸ್ಥರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬೆಳೆ, ಮಾರುಕಟ್ಟೆ, ಆದಾಯದ ಕುರಿತು ಸಕಾಲದಲ್ಲಿ ಮಾಹಿತಿ ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಈ ಕಾರ್ಯಾಗಾರದಲ್ಲಿ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ|| ಪಿ.ಎಂ.ಸೊಬರದ, ವಿವಿಯ ವಿಸ್ತರಣಾ ನಿರ್ದೇಶಕ ಡಾ|| ಬಿ.ಹೇಮ್ಲಾನಾಯ್ಕ್, ಡೀನ್ ಡಾ|| ಬಿ.ಎಂ.ದುಷ್ಯಂತಕುಮಾರ್, ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ|| ಡಿ.ತಿಪ್ಪೇಶ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ|| ಎಂ.ವಿಶ್ವನಾಥ್. ಉಪನಿರ್ದೇಶಕ ಡಾ|| ಪ್ರಕಾಶ್ ಜಿ.ಎನ್., ಕಲ್ಪವೃಕ್ಷ ತಾಳೆಬೆಳೆ ಹರಿಹರ ಸಂಸ್ಕರಣಾ ಘಟಕದ ಕಾರ್ಯಕಾರಿ ನಿರ್ದೇಶಕ ವಿನೋಥ ಸೆಂಥಿಲಾತಿಬನ್, ಕರ್ನಾಟಕ ತಾಳೆಬೆಳೆ ಬೆಲೆ ನಿಗಧಿ ಸಮಿತಿ ಸದಸ್ಯ ಎಸ್.ವಿ.ನರಸಿಂಹಮೂರ್ತಿ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆಂದ್ರಪ್ರದೇಶದ ಭಾರತೀಯ ತಾಳೆಬೆಳೆ ಸಂಶೋಧನಾ ಸಂಸ್ಥೆ ಪೆಡವೆಗಿಯ ಪ್ರಧಾನ ವಿಜ್ಞಾನಿಗಳಾದ ಡಾ|| ಕೆ.ಮನೋರಮಾ ಮತ್ತು ಡಾ|| ಜಿ.ರವಿಚಂದ್ರ ಅವರು ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ವಿವಿಯ ಸಂಶೋಧನಾ ನಿರ್ದೇಶಕ ಡಾ||ಮೃತ್ಯುಂಜಯ ವಾಲಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.