ಶಿವಮೊಗ್ಗ, ಮಾರ್ಚ್ 25: ಮನುಕುಲಕ್ಕೆ ಅಂಟಿದ ಮಹಾಮಾರಿ ಕ್ಷಯರೋಗದ ನಿಯಂತ್ರಣಕ್ಕೆ ದೇಶದ ಪ್ರತಿಯೊಬ್ಬ ನಾಗರೀಕರೂ ಸಂಕಲ್ಪ ಮಾಡೋಣ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವಕ್ಷಯರೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕ್ಷಯ ರೋಗದ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವ, ಅದನ್ನು ನಿಯಂತ್ರಿಸುವ ಕ್ರಮಗಳ ಹಾಗೂ ಬಾದಿತರಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡುವ ವಿಧಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 18,542 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ, 1,480ಕ್ಷಯರೋಗಿಗಳನ್ನು ಪತ್ತೆಹಚ್ಚಿ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಹಾಗೆಯೇ 29 ಎಂ.ಡಿ.ಆರ್.ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಯೋಗಾ¯ಯವನ್ನು ಆರಂಭಿಸಲಾಗಿದೆ ಎಂದವರು ನುಡಿದರು.
ಟಿ.ಬಿ.ನೋಟಿಫಿಕೇಶನ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಖಾಸಗಿ ಸಂಸ್ಥೆಗಳಿಂದ ಮಾಸಿಕ ವರದಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಕಳೆದ ವರ್ಷ ಒಂದರಲ್ಲಿ ಸುಮಾರು 207ರೋಗಿಗಳ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದ ಅವರು, ಕೇಂದ್ರ ಸರ್ಕಾರದ ಗೆಜೆಟ್ ನೋಟೀಫಿಕೇಶನ್ ಹೊರಡಿಸಿದ್ದು, ಖಾಸಗಿ ಮೆಡಿಕಲ್ ಸ್ಟೋರ್‍ಗಳು ಕೂಡ ಪ್ರತಿ ತಿಂಗಳು ವರದಿ ನೀಡುವುದನ್ನು ಕಡ್ಡಾಯಗೊಳಿಸಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಹೈರಿಸ್ಕ್ ಪ್ರದೇಶಗಳಲ್ಲಿ, ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ, ಕಾರ್ಖಾನೆಗಳಲ್ಲಿ, ಹೆಚ್.ಐ.ವಿ. ಬಾಧಿತರಲ್ಲಿ, ಮಧುಮೇಹಿಗಳಿರುವ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ, ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲು ಸೂಚಿಸಲಾಗಿದೆ ಎಂದ ಅವರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕ್ಷಯರೋಗಿಗಳಿಗೆ ಚಿಕಿತ್ಸಾ ಅವಧಿಯಲ್ಲಿ ಪ್ರತಿ ಮಾಹೆ ರೂ.50/-ನ್ನು ನಿಕ್ಷಯ ಪೋಷಣ್ ಅಡಿಯಲ್ಲಿ ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತಿದೆ ಎಂದರು.
ಕ್ಷಯರೋಗ ಎನ್ನುವುದು ಜನಸಾಮಾನ್ಯರಲ್ಲಿ ಕೇಳಲ್ಪಡುವ ಒಂದು ಸಾಂಕ್ರಾಮಿಕ ಖಾಯಿಲೆ. ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡುವ ಕಾಯಿಲೆ ಇದಾಗಿದ್ದು, ಭಾರತದಂತಹ ರಾಷ್ಟ್ರದ ಆರೋಗ್ಯ ಕ್ಷೇತ್ರದ ಅತಿಹೆಚ್ಚಿನ ಹೊರೆಯಾಗಿ ಪರಣಮಿಸಿದೆ. ಬೇರೆ ಸಾಂಕ್ರಾಮಿಕ ರೋಗಕ್ಕಿಂತ ಅತಿ ಹೆಚ್ಚು ಜನರನ್ನು ಮರಣಕ್ಕೀಡು ಮಾಡುವ ಕಾಯಿಲೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಕ್ಷಯ ಹೊಂದಿರುವ ರೋಗಿಗಳೊಡನೆ ಸಂಪರ್ಕದಿಂದ ದೂರ ಇರುವುದು ಕ್ಷೇಮಕರ. ಅಗತ್ಯವಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆದು ಅಗತ್ಯವಿದ್ದರೆ ಚಿಕಿತ್ಸೆ ಆರಂಭಿಸುವುದು ಸೂಕ್ತ ಎಂದರು.
ಈ ರೋಗದ ನಿಯಂತ್ರಣಕ್ಕಾಗಿ ಕೈಗಳ ಮತ್ತು ದೇಹದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಮಾಂಸಾಹಾರ ಸೇವಿಸುವವರು ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಧೂಮಪಾನ, ಮದ್ಯಪಾನ ವ್ಯಸನಗಳಿಗೆ ಕಡಿವಾಣ ಹಾಕಬೇಕು. ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಮತ್ತು ನೀರು ಸೇವಿಸಬೇಕು. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮರೆಮಾಡಿಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿಯ ಜೊತೆಗೆ ವ್ಯವಹರಿಸುವಾಗ ಅವರಿಗೆ ರೋಗ ಹರಡದಂತೆ ಗಮನ ಹರಿಸುವುದು ಪ್ರತಿ ರೋಗಿಯ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ರಘುನಂದನ್, ಆರ್.ಸಿ.ಹೆಚ್.ಅಧಿಕಾರಿ ಡಾ.ನಟರಾಜ್, ಡಿ.ಟಿ.ಒ. ಡಾ||ನಟರಾಜ್, ಡಾ||ಶಂಕರಪ್ಪ, ಡಾ.ಪೈ., ಡಾ. ಕಿರಣ್, ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.